ಗುಣಾತ್ಮಕ ಶೈಕ್ಷಣಿಕ ವರ್ಷವಾಗಿಸಲು ಸಜ್ಜಾಗಲು ಕರೆ

ಕೋಲಾರ,ಮೇ,೨೪- ಶಾಲೆಗಳು ಮೇ.೨೯ ರಂದು ಆರಂಭಗೊಳ್ಳುತ್ತಿದ್ದು, ಆ ದಿನವನ್ನು ಹಬ್ಬವಾಗಿ ಸಂಭ್ರಮದಿಂದ ಆಚರಿಸಿ, ತಳಿರುತೋರಣಗಳಿಂದ ಶಾಲೆಯನ್ನು ಸಿಂಗರಿಸಿ ಮಕ್ಕಳನ್ನು ಸ್ವಾಗತಿಸಿ, ಈ ಶೈಕ್ಷಣಿಕ ಸಾಲನ್ನು ಗುಣಾತ್ಮಕ ಶೈಕ್ಷಣಿಕವರ್ಷವಾಗಿಸಲು ಸಜ್ಜಾಗಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕನ್ನಯ್ಯ ಕರೆ ನೀಡಿದರು.
ನಗರದ ಗುರುಭವನದಲ್ಲಿ ಹಮ್ಮಿಕೊಂಡಿದ್ದ ತಾಲ್ಲೂಕು ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಭೆಯ ಅಧ್ಯಕ್ಷತೆ ವಹಿಸಿ, ಎಸ್ಸೆಸ್ಸೆಲ್ಸಿಯಲ್ಲಿ ಶೇ.೧೦೦ ಸಾಧಕ ಶಾಲೆಗಳಿಗೆ ಪ್ರಮಾಣಪತ್ರ ವಿತರಿಸಿ ಅವರು ಮಾತನಾಡುತ್ತಿದ್ದರು.
ಈ ಸಾಲಿನಲ್ಲಿ ಶಾಲೆಯತ್ತ ಸಮುದಾಯ ಎಂಬ ಶೀರ್ಷಿಕೆಯಡಿ ಕೆಲಸ ಮಾಡಿ, ಶಾಲೆಗಳ ಸಮಗ್ರ ಅಭಿವೃದ್ದಿಗೆ ಒತ್ತು ನೀಡಿ ಎಂದ ಅವರು, ನಿಮ್ಮ ಗುರಿ ಶೇ.೧೦೦ ಫಲಿತಾಂಶವಾಗಿರಲಿ, ಪ್ರತಿ ಮಗುವು ಶೈಕ್ಷಣಿಕವಾಗಿ ಸಾಧನೆ ಮಾಡಬೇಕು ಎಂಬ ಆಶಯದೊಂದಿಗೆ ಕೆಲಸ ಮಾಡುವ ಸಂಕಲ್ಪ ಮಾಡಿ ಎಂದರು.
ಶಾಲೆ ಆರಂಭಕ್ಕೆ ಮುನ್ನಾ ಒಂದು ದಿನ ಎಲ್ಲಾ ಶಿಕ್ಷಕರು,ಸಿಬ್ಬಂದಿ ಶಾಲಾ ಪ್ರಾರಂಭದ ಪೂರ್ವದಲ್ಲಿ ಶಾಲೆಗಳನ್ನು ಸಿದ್ದಗೊಳಿಸಿ ಆಕರ್ಷಣೀಯತಗೊಳಿಸಲು ಕ್ರಮ ವಹಿಸ ಬೇಕು. ಶಾಲಾಭಿವೃದ್ದಿ ಸಮಿತಿ, ಪೋಷಕರು,ಶಿಕ್ಷಕರು ಜತೆಗೂಡಿ ಶಾಲೆಗಳನ್ನು ಸ್ವಚ್ಚಗೊಳಿಸಿ, ತಳಿರುತೋರಣಗಳಿಂದ ಅಲಂಕರಿಸಿ ಮಕ್ಕಳನ್ನು ಆಹ್ವಾನಿಸಲು ಸಿದ್ದರಿರುವಂತೆ ಅವರು ಸೂಚಿಸಿ, ಮಕ್ಕಳು ಶಾಲೆಗೆಬರುವ ದಿನ ಶಾಲೆಯಲ್ಲಿ ಹಬ್ಬದಂತಿರಬೇಕು, ಈ ಸಂದೇಶ ಪೋಷಕರಿಗೆ ತಲುಪಬೇಕು ಎಂದರು.
ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಹೆಚ್ಚಳಕ್ಕೆ ಅಗತ್ಯ ದಾಖಲಾತಿ ಆಂದೋಲನ ನಡೆಸಿ, ಮಕ್ಕಳನ್ನು ಶಾಲೆಗೆ ಸ್ವಾಗತಿಸಿ, ಮತ್ತಷ್ಟು ಮಕ್ಕಳಿಗೆ ನಿಮ್ಮ ಕಾರ್ಯ ಪ್ರೇರಣೆ ನೀಡುವಂತಿರಲಿ, ಶಾಲೆಗಳಲ್ಲಿ ಮಕ್ಕಳ ಕಲಿಕೆಗೆ ಪೂರಕವಾದ ಮತ್ತು ಆಕರ್ಷಣೀಯವಾದ ರೀತಿಯಲ್ಲಿ ಸಜ್ಜುಗೊಳಿಸ ಬೇಕು.ಎಸ್‌ಡಿಎಂಸಿ, ದಾನಿಗಳ ನೆರವು ಪಡೆದು ಶಾಲೆಯಲ್ಲಿ ಅಗತ್ಯತೆಗಳನ್ನು ಪೂರೈಸಲು ಗಮನಹರಿಸಿ ಎಂದ ಅವರು, ಸರ್ಕಾರಿ ಶಾಲೆಗಳ ಕುರಿತು ಪೋಷಕರಲ್ಲಿನ ಕೀಳಿರಿಮೆ ಹೋಗಲಾಡಿಸುವುದು ಅಗತ್ಯವಿದೆ ಎಂದು ಹೇಳಿದರು.
ಡಿಡಿಪಿಐ ಹಾಗೂ ಬಿಇಒ ನೇತೃತ್ವದ ತಂಡಗಳಿಂದ ಮಿಂಚಿನ ಸಂಚಾರ ನಡೆಯಲಿದೆ. ಮಿಂಚಿನ ಸಂಚಾರದ ತಂಡಗಳು ಜಿಲ್ಲಾದ್ಯಂತ ಶಾಲೆಗಳಿಗೆ ಭೇಟಿ ನೀಡಿ, ಶಾಲಾ ಸ್ವಚ್ಚತೆ, ಶಾಲಾ ಪ್ರಾರಂಭೋತ್ಸವಕ್ಕೆ ಕೈಗೊಂಡಿರುವ ಕ್ರಮಗಳು, ದಾಖಲೆಗಳ ನಿರ್ವಹಣೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಪರಿಶೀಲನೆ ನಡೆಸಲಿದೆ.ಮಕ್ಕಳ ನಿರಂತರ ಹಾಜರಾತಿಗಾಗಿ ಶಿಕ್ಷಕರ ತಂಡಗಳು ಮನೆ ಮನೆ ಭೇಟಿ ಕಾರ್ಯಕ್ರಮ ಹಾಕಿಕೊಳ್ಳಿ, ಯಾವುದೇ ಮಗು ಶಾಲೆಯಿಂದ ಹೊರಗುಳಿಯದಂತೆ ಎಚ್ಚರವಹಿಸಿ, ಪೋಷಕರು, ಎಸ್‌ಡಿಎಂಸಿ ಸಹಕಾರ ಪಡೆದು ಶಾಲೆ ಬಿಟ್ಟ ಮಕ್ಕಳನ್ನು ಮತ್ತೆ ಶಾಲೆಗೆ ಕರೆತರುವ ಕೆಲಸ ಮಾಡಿ ಎಂದು ತಾಕೀತು ಮಾಡಿದರು.
೮, ೯ನೇ ತರಗತಿಗಳಲ್ಲಿ ಶುಲ್ಕ ಪಾವತಿಸಿಲ್ಲ ಎಂದು ಮಕ್ಕಳನ್ನು ಮುಂದಿನ ತರಗತಿಗಳಿಗೆ ದಾಖಲಿಸಿಕೊಳ್ಳುವುದಿಲ್ಲ ಎಂದರೆ ಅದು ಅಪರಾಧವಾಗುತ್ತದೆ, ಶಾಲೆಗಳಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ಇದ್ದರೆ ಪಟ್ಟಿ ಮಾಡಿ, ಶಿಕ್ಷಕರ ಕೊರತೆ ಇದ್ದರೆ ಅಗತ್ಯ ಅತಿಥಿ ಶಿಕ್ಷಕರ ನೇಮಕಕ್ಕೆ ಇಲಾಖೆಗೆ ಮಾಹಿತಿ ರವಾನಿಸ ಬೇಕು.ಶಾಲೆಯಲ್ಲಿ ಆಡಳಿತಾತ್ಮಕ ಹಾಗೂ ಶೈಕ್ಷಣಿಕ ದಾಖಲೆಗಳನ್ನು ಸಮರ್ಪಕವಾಗಿ ನಿರ್ವಹಿಸಿ ಎಂದ ಅವರು, ಕ್ಲಬ್‌ಗಳ ರಚನೆ, ಸಂಸತ್ ರಚನೆಗೆ ನೋಡಲ್ ಶಿಕ್ಷಕರನ್ನು ನೇಮಿಸಿ, ಶಾಲಾ ಕ್ರಿಯಾಯೋಜನೆ, ಶಾಲಾ ಪಂಚಾಂಗ, ಶಾಲಾಭಿವೃದ್ದಿ ಯೋಜನೆ, ಶಾಲಾ ಶೈಕ್ಷಣಿಕ ಯೋಜನೆ, ವೇಳಾಪಟ್ಟಿ ಸಿದ್ದಪಡಿಸಿ, ಜೂ.೧ರಿಂದ ೧೫ ರವರೆಗೂ ಸೇತುಬಂಧ ನಡೆಸಿ ಎಂದರು.
ತಾಲ್ಲೂಕು ಮಧ್ಯಾಹ್ನ ಬಿಸಿಯೂಟ ಯೋಜನೆ ಸಹಾಯಕ ನಿರ್ದೇಶಕ ಸುಬ್ರಹ್ಮಣ್ಯಂ ಮಾತನಾಡಿದರು ಇದೇ ಸಂದರ್ಭದಲ್ಲಿ ಜಿಲ್ಲೆಗೆ ೩ನೇ ಸ್ಥಾನ ಬರಲು ಕಾರಣರಾದ ಕ್ಷೇತ್ರ ಶಿಕ್ಷಣಾಧಿಕಾರಿ ಕನ್ನಯ್ಯ ಅವರನ್ನು ಮುಖ್ಯಶಿಕ್ಷಕರ ಸಂಘದಿಂದ ಸನ್ಮಾನಿಸಲಾಯಿತು.
ಸಭೆಯಲ್ಲಿ ಜಿಲ್ಲಾ ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ಚಂದ್ರಪ್ಪ, ಪ್ರಭಾರ ಬಿಆರ್‌ಸಿ ಪ್ರವೀಣ್, ತಾಲ್ಲೂಕು ಎಸ್ಸೆಸ್ಸೆಲ್ಸಿ ಪರೀಕ್ಷಾ ನೋಡಲ್ ಅಧಿಕಾರಿ ಮುನಿರತ್ನಯ್ಯಶೆಟ್ಟಿ, ಇಸಿಒಗಳಾದ ರಾಘವೇಂದ್ರ, ವೆಂಕಟಾಚಲಪತಿ, ಮುಖ್ಯಶಿಕ್ಷಕರ ಸಂಘದ ಕಾರ್ಯದರ್ಶಿ ರಮೇಶ್‌ಗೌಡ, ಸಿ.ಎನ್.ಪ್ರದೀಪ್‌ಕುಮಾರ್ ಸೇರಿದಂತೆ ತಾಲ್ಲೂಕಿನ ಎಲ್ಲಾ ಪ್ರೌಢಶಾಲಾ ಮುಖ್ಯಶಿಕ್ಷಕರು ಹಾಜರಿದ್ದರು.