ಗುಣಾತ್ಮಕ ಶಿಕ್ಷಣ ವರ್ಷವಾಗಿ ಆಚರಿಸಲು ಪಣ ತೊಡಲು ಕರೆ


ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಮೇ.26 :- ಶೈಕ್ಷಣಿಕವಾಗಿ ಶಾಲಾ ಪ್ರಾರಂಭೋತ್ಸವಕ್ಕೂ ಮೊದಲು ಗ್ರಾಮಗಳಲ್ಲಿ ಶಿಕ್ಷಕರು ಆಂದೋಲನ ನಡೆಸಿ, ಮಕ್ಕಳ ಹಾಜರಾತಿ ಹೆಚ್ಚಳ ಮಾಡುವ ಮೂಲಕ  ಮಕ್ಕಳಿಗೆ ಉತ್ತಮ ಗುಣಾತ್ಮಕ ಶಿಕ್ಷಣ ನೀಡಿ ಈ ಸಾಲಿನ ವರ್ಷವನ್ನು ಗುಣಾತ್ಮಕ ಶಿಕ್ಷಣ ವರ್ಷವನ್ನಾಗಿ ಆಚರಿಸಲು ಎಲ್ಲಾ ಶಿಕ್ಷಕ ವರ್ಗದವರು  ಪಣ ತೊಡಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಕೂಡ್ಲಿಗಿ ಕ್ಷೇತ್ರ ಸಮನ್ವಯಾಧಿಕಾರಿ ಜಗದೀಶ ಶಿಕ್ಷಕ ವರ್ಗದವರಿಗೆ ಕಿವಿ ಮಾತು ಹೇಳಿದರು.
ಅವರು ತಾಲೂಕಿನ ಕಾನಹೊಸಹಳ್ಳಿ ಗ್ರಾಮದ ಶ್ರೀ ವೈಭವಶಾಲೆಯ ಆವರಣದಲ್ಲಿ ಗುರುವಾರ ಶಿಕ್ಷಣ ಸಂಯೋಜಕರು ಹಾಗೂ ವಲಯದ ಎಲ್ಲಾ ಮುಖ್ಯ ಶಿಕ್ಷಕರು, ಪ್ರಭಾರಿ ಮುಖ್ಯಗುರುಗಳು ಇವರುಗಳಿಗೆ 2023-24 ನೇ ಸಾಲಿನ ಶಾಲಾ ಪ್ರಾರಂಭೋತ್ಸವ, ಶೈಕ್ಷಣಿಕ ಚಟುವಟಿಕೆಗಳ ಕುರಿತಾದ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತ ಈ ಬಾರಿ ಪ್ರತಿವರ್ಷಕ್ಕಿಂತಲೂ ಮಿಗಿಲಾಗಿ ಆಯಾ ಗ್ರಾಮದಲ್ಲಿರುವ ಶಾಲೆಯ ಶಿಕ್ಷಕರು ಶೈಕ್ಷಣಿಕ ವರ್ಷದ ಆಂದೋಲನ ನಡೆಸಿ ಶಾಲೆಗೆ ಬಿಟ್ಟ ಮಕ್ಕಳನ್ನು ಕರೆತರುವುದು, ತಂದೆ ತಾಯಿಗಳಿಗೆ ಸರ್ಕಾರಿ ಶಾಲೆಯಿಂದ ಮಕ್ಕಳಿಗೆ ಸಿಗುವ ಶೈಕ್ಷಣಿಕ ಸವಲತ್ತುಗಳ ಮಹತ್ವ ತಿಳಿಸುವ ಮೂಲಕ ಈ ಬಾರಿ ಮಕ್ಕಳ ಹಾಜರಾತಿ ಹೆಚ್ಚಳ ಮಾಡಿದಲ್ಲಿ ಯಾವುದೇ ಮಗು ಶಿಕ್ಷಣದಿಂದ ವಂಚಿತರಾಗದಂತೆ ಗಮನಹರಿಸಿ ಮೇ 29ರಿಂದ ಪ್ರಾರಂಭವಾಗುವ ಶಾಲೆಯಲ್ಲಿ ಅಂದೇ ಪಠ್ಯ ಪುಸ್ತಕ ಹಾಗೂ ಮಕ್ಕಳಿಗೆ ಸಮವಸ್ತ್ರ ವಿತರಣೆ ಮಾಡುವ ಮೂಲಕ ಅಲ್ಲಿನ ಆಯಾ ಶಾಲೆಯ ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಪದಾಧಿಕಾರಿಗಳು ಹಾಗೂ ಜನಪ್ರತಿನಿದಿಗಳ ಸಮ್ಮುಖದಲ್ಲಿ ಶಾಲಾ ಪ್ರಾರಂಭೋತ್ಸವವನ್ನು ಹಬ್ಬದ ರೀತಿಯಲ್ಲಿ ಆಚರಿಸಿ ಈ ವರ್ಷ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡಿ ಗುಣಾತ್ಮಕ ಶೈಕ್ಷಣಿಕ ವರ್ಷವಾಗಿ ಆಚರಿಸಲು ಪ್ರತಿಯೊಬ್ಬ ಶಿಕ್ಷಕರು ಇಂದಿನಿಂದಲೇ ಪಣ ತೊಡುವಂತೆ ತಾಲೂಕಿನ ಎಲ್ಲಾ ಶಿಕ್ಷಕರ ಕುರಿತು ಜಗದೀಶ ಕಿವಿಮಾತು  ಹೇಳಿದರು.
ತಾಲೂಕಿನ ಬಿಸಿಯೂಟ ಸಹಾಯಕ ನಿರ್ದೇಶಕ ಆಂಜನೇಯ ಮಾತನಾಡಿ ವರ್ಷದಿಂದ ವರ್ಷಕ್ಕೆ ಮಕ್ಕಳ ಗುಣಾತ್ಮಕ ಶಿಕ್ಷಣ ನೀಡಲು ಸರ್ಕಾರ ಅನೇಕ ರೀತಿಯ ಯೋಜನೆಗಳನ್ನು ನೀಡುತ್ತಿದ್ದು ಪಾಲಕ ಪೋಷಕರು  ಮಕ್ಕಳನ್ನು ಶಾಲೆಗೆ ಕಳುಹಿಸುವ ಮೂಲಕ ವಿದ್ಯಾವಂತರನ್ನಾಗಿ ಮಾಡಲು ಮುಂದಾಗಬೇಕು ಅಲ್ಲದೆ ಶಿಕ್ಷಕರು ಆಯಾ ಗ್ರಾಮದಲ್ಲಿನ ಜನತೆಗೆ ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡದೆ ಕಡ್ಡಾಯವಾಗಿ  ಶಿಕ್ಷಣ ಪಡೆಯಲು ಶಾಲೆಗೆ ಕಳುಹಿಸುವಂತೆ ಆಂದೋಲನದ ಮೂಲಕ ಮನವರಿಕೆ ಮಾಡಬೇಕಿದೆ ಎಂದರು ಅಲ್ಲದೆ ಮೇ 29ರಿಂದ ಶಾಲೆ ಪ್ರಾರಂಭವಾಗಲಿದ್ದು ಅಂದಿನ ದಿನದಿಂದ ಶಾಲಾಪ್ರಾರಂಭೋತ್ಸವದ ಅಂಗವಾಗಿ  ಬಿಸಿಯೂಟದ ಜೊತೆಯಲ್ಲಿ ಐದುದಿನದವರೆಗೆ ಸಿಹಿಯೂಟ ನೀಡಲಾಗುವುದು ಎಂದು ಆಂಜನೇಯ ತಿಳಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳು ಗೈರು :- ಶಾಲೆಯ ಪ್ರಾರಂಭೋತ್ಸವ,  ಶೈಕ್ಷಣಿಕ ಆಂದೋಲನದ ಮೂಲಕ ಮಕ್ಕಳ ಹಾಜರಾತಿ ಹೆಚ್ಚಳ, ಶಾಲೆಯ ಪ್ರಾರಂಭದಲ್ಲಿ ತೆಗೆದುಕೊಳ್ಳಬೇಕಾದ ಪೂರ್ವಾಪರ ಶೈಕ್ಷಣಿಕ ಚಟುವಟಿಕೆ ನಿರ್ಣಾಯಗಳ ಮುಖ್ಯವಾದ ಸಭೆ ಗುರುವಾರ ವೈಭವ ಶಾಲೆಯಲ್ಲಿ ಜರುಗಿದ್ದು ಈ ಸಭೆಗೆ ಮುಖ್ಯವಾಗಿ ಹಾಜರಾಗಬೇಕಿದ್ದ  ಶಿಕ್ಷಣ ಇಲಾಖೆಯತಾಲೂಕು  ಕ್ಷೇತ್ರ ಶಿಕ್ಷಣಾಧಿಕಾರಿಗಳೇ ಗೈರಾಗಿದ್ದು ಕಂಡುಬಂದಿತ್ತು ಇದು ಅವರ ಕರ್ತವ್ಯದ ಕಾರ್ಯವೈಖರಿಯನ್ನು ತೋರಿಸುತ್ತದೆ.
ಈ ಸಂದರ್ಭದಲ್ಲಿ ಸಿಆರ್ ಪಿ ಗಳಾದ ಜಿ ಟಿ ಸಿದ್ದೇಶ್ವರ, ಎಸ್ ಡಿ ತಿಪ್ಪೇಸ್ವಾಮಿ, ಎಂ ಎಸ್ ಲೋಕೇಶ, ವಾಣಿ, ಅನುಪಮಾ, ಬೋರಯ್ಯ,ಲಿಂಗಪ್ಪ ಸೇರಿದಂತೆ ಇತರರಿದ್ದರು.