ಗುಣಮಟ್ಟ ಬದುಕಿನ ಅವಿಭಾಜ್ಯವಾಗಲಿ

ತುಮಕೂರು, ನ. ೧೪- ನಾವು ಪ್ರತಿಯೊಂದರಲ್ಲೂ ಗುಣಮಟ್ಟವನ್ನು ಹುಡುಕುತ್ತೇವೆ. ಆದರೆ ಗುಣಮಟ್ಟ ಎಂದರೇನು ಎಂಬುವುದನ್ನೆ ಮರೆತಿದ್ದೇವೆ. ಮನುಷ್ಯ ಎಷ್ಟು ಕ್ರಿಯಾಶೀಲನಾಗಿರುತ್ತಾನೋ ಅಷ್ಟು ಆರೋಗ್ಯವಾಗಿರುತ್ತಾನೆ. ಗುಣಮಟ್ಟದ ಕೆಲಸ ನಮ್ಮದಾಗಿದ್ದರೆ, ಗುಣಮಟ್ಟದ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ ಎಂದು ಸಾಹೇ ವಿಶ್ವವಿದ್ಯಾನಿಲಯದ ಶ್ರೀ ಸಿದ್ಧಾರ್ಥ ಆಕಾಡೆಮಿ ಆಫ್ ಹೈಯರ್ ಎಜುಕೇಷನ್ (ಸಾಹೇ) ಉಪಕುಲಪತಿ ಡಾ.ಪಿ.ಬಾಲಕೃಷ್ಣಶೆಟ್ಟಿ ಅಭಿಪ್ರಾಯಪಟ್ಟರು.
ನಗರದ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಪಿಜಿ ಸಭಾಂಗಣದಲ್ಲಿ ಕಾಲೇಜಿನ ‘ಆಂತರಿಕ ಗುಣಮಟ್ಟದ ಭರವಸೆ ಘಟಕದ’ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ‘ವಿಶ್ವ ಗುಣಮಟ್ಟ ದಿನ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಆರೋಗ್ಯ ಎಂಬುವುದು ಕೇವಲ ಗುಣಮಟ್ಟದ ಆಹಾರ, ಧ್ಯಾನ, ವ್ಯಾಯಾಮ, ಮಾಡುವುದರಿಂದ ದೊರೆಯುವುದಿಲ್ಲ. ಇವುಗಳ ಜತೆಗೆ ನಾವೂ ಕೂಡ ಕ್ರಿಯಾಶೀಲರಾಗಿರಬೇಕು. ಬೆಳಗ್ಗಿನಿಂದಲೇ ಕೂಡಲೆ ಕಾಯಕದಲ್ಲಿ ನಿರತನಾಗುವವನೇ ನಿಜವಾದ ಆರೋಗ್ಯವಂತ ಮತ್ತು ಕ್ರಿಯಾಶೀಲ ವ್ಯಕ್ತಿ ಎಂದರು.
ಆಹಾರ, ಧ್ಯಾನ, ವ್ಯಾಯಾಮ ಇತರೆ ಆರೋಗ್ಯಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಗುಣಮಟ್ಟವನ್ನು ಹುಡುಕುವ ನಾವು ಆರೋಗ್ಯವಾಗಿರಲು ದೇಹವನ್ನು ದಂಡಿಸಿ ಕೆಲಸ ಮಾಡಬೇಕು ಎಂಬುವುದನ್ನು ಮರೆತಿದ್ದೇವೆ. ಮನುಷ್ಯ ಮಾನಸಿಕವಾಗಿ ಮತ್ತು ದೈಹಿಕವಾಗಿ ಸದೃಢವಾಗಿದ್ದರೆ ಆತ ಆರೋಗ್ಯವಂತ ಎಂದು ವಿಶ್ವ ಆರೋಗ್ಯ ಸಂಸ್ಥೆಯು ಹೇಳುತ್ತದೆ. ಸೋಮಾರಿಗಳು ಅದೆಷ್ಟೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಸದೃಢವಾಗಿದ್ದರೂ ಅಂತಹವರು ನಿಜವಾದ ಬಹುದೊಡ್ಡ ರೋಗಿಗಳು ಎಂದು ತಮ್ಮ ವೈದ್ಯಕೀಯ ವೃತ್ತಿಯ ಕೆಲ ಅನುಭವಗಳನ್ನು ಹಂಚಿಕೊಂಡರು.
ಸಾಹೆ ವಿಶ್ವವಿದ್ಯಾಲಯದ ಕುಲಸಚಿವರಾದ ಡಾ.ಎಂ.ಝಡ್ ಕುರಿಯನ್ ಮಾತನಾಡಿ, ಗುಣಮಟ್ಟ ಎಂದರೇನು ಎಂಬ ಪ್ರಶ್ನೆಗೆ ಪ್ರತಿಯೊಬ್ಬರು ಅವರದ್ದೆ ಆದ ವ್ಯಾಖ್ಯಾನಗಳನ್ನು ನೀಡುತ್ತಾರೆ. ಈ ಪ್ರಶ್ನೆಗೆ ನಿಖರವಾದ ಉತ್ತರ ಯಾರಿಗೂ ದೊರೆತಿಲ್ಲ. ಗುಣಮಟ್ಟವನ್ನು ಕಾಪಾಡಿಕೊಳ್ಳಬೇಕೆಂದರೆ ನಮ್ಮಲ್ಲಿ ವಿದೇಯತೆ, ಕಾರ್ಯತತ್ವರತೆ ಮತ್ತು ಶಿಸ್ತು ಇರಬೇಕು. ಆಗ ಮಾತ್ರ ಅಂದುಕೊಂಡ ಗುಣಮಟ್ಟತೆ ನಮಗೆ ಸಿಗುತ್ತದೆ. ವಿಧೇಯತೆಯಿಂದ, ಶಿಸ್ತುಬದ್ದವಾಗಿ ಕೆಲಸ ಮಾಡುವ ವ್ಯಕ್ತಿಯನ್ನು ಗುರುತಿಸಿ ಅವನಿಗೆ ಸನ್ಮಾನ ಮಾಡಿದ ದಿನವೆ ನಿಜವಾದ ಗುಣಮಟ್ಟದ ದಿನ ಎಂದರು.
ಖ್ಯಾತ ಅಂಕಣಕಾರ ಹಾಗೂ ಬಾಹ್ಯಾಕಾಶ ಇಂಜಿನಿಯರಿಂಗ್ ಸಮಾಲೋಚಕ ಸುಧೀಂದ್ರ ಹಾಲ್ದೋರಿ ಮಾತನಾಡಿ, ಇಂಜನಿಯರಿಂಗ್ ಕ್ಷೇತ್ರದಲ್ಲಿ ಕ್ಷೇತ್ರದಲ್ಲಿ ಗುಣಮಟ್ಟ ಅಂಶಗಳು ಕುರಿತು ಉಪನ್ಯಾಸ ನೀಡಿದರು. ಜನ ಜೀವನಕ್ಕೆ ಪೂರಕವಾದ ಗುಣಮಟ್ಟದ ಕೆಲಸಗಳನ್ನು ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಕಾಣಬಹುದಾಗಿದೆ. ಜೀವನಕ್ಕೆ ಅಗತ್ಯವಾದ ಗುಣಮಟ್ಟದ ಆವಿಷ್ಕಾರಗಳನ್ನು, ಹೊಸತನಗಳನ್ನು ಇಂಜನಿಯರಿಂಗ್ ಕ್ಷೇತ್ರ ಸಮಾಜಕ್ಕೆ ನೀಡಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಎಂ.ಎಸ್.ರವಿಪ್ರಕಾಶ್ ವಹಿಸಿದ್ದರು. ಪರೀಕ್ಷಾಂಗ ವಿಭಾಗದ ಕುಲಸಚಿವರಾದ ಡಾ.ಕರುಣಾಕರ್, ಡೀನ್ ಡಾ. ಸಿದ್ಧಪ್ಪ, ಐಕ್ಯೂ ಘಟಕದ ಮುಖ್ಯ ಸಂಚಾಲಕ ಡಾ.ಆರ್.ಪ್ರಕಾಶ್, ಸಹಾಯಕ ಪ್ರಾಧ್ಯಾಪಕ ಡಾ. ವಿ. ರವಿರಾಮ್, ಡಾ.ರವಿಕಿರಣ, ಡಾ.ಎನ್. ಪ್ರದೀಪ್ ಮತ್ತಿತರರು ಉಪಸ್ಥಿತರಿದ್ದರು.