ಗುಣಮಟ್ಟ ಕಳೆದುಕೊಂಡ ಮಣ್ಣು ರಸ್ತೆಗೆ ಬಳಕೆ: ಆಕ್ರೋಶ

??????

ಜಗದೇವ ಎಸ್ ಕುಂಬಾರ
ಚಿತ್ತಾಪುರ:ಜ.20: ತಾಲ್ಲೂಕಿನ ಕಮರವಾಡಿಯ ಸಾರ್ವಜನಿಕರ ಓಡಾಟಕ್ಕೆ ತೊಂದರೆ ಉಂಟಾಗಬಾರದು ಎನ್ನುವ ದೃಷ್ಟಿಯಿಂದ ಸಚಿವ ಪ್ರಿಯಾಂಕ್ ಖರ್ಗೆ ಕೋಟಿಗಟ್ಟಲೆ ಅನುದಾನ ಬಿಡುಗಡೆ ಮಾಡಿ ರಸ್ತೆ ಅಭಿವೃದ್ಧಿ ಪಡಿಸುತ್ತಿದ್ದಾರೆ. ಆದರೆ ಗುತ್ತಿಗೆದಾರೊಬ್ಬ ರಸ್ತೆಗೆ ಗುಣಮಟ್ಟ ಕಳೆದುಕೊಂಡ ಮಣ್ಣು ಬಳಕೆ ಮಾಡುವ ಮೂಲಕ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾನೆ.

ಪ್ರಧಾನ ಮಂತ್ರಿ ಗ್ರಾಮ ಸಡಕ ಯೋಜನೆ ಅಡಿಯಲ್ಲಿ 4.38 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಕಮರವಾಡಿಯಿಂದ ಬಳಿರಾಮಚೌಕ್ ವರೆಗಿನ 6.ಕಿಮೀ ಡಾಂಬಾರೀಕರಣ ರಸ್ತೆ, ಆರಂಭಿಕ ಹಂತದಲ್ಲೇ ಕಳಪೆ ಕಾಮಗಾರಿಗೆ ಸಾಕ್ಷಿಯಾಗಿದೆ. ಮಣ್ಣಿನ ಗುಣಮಟ್ಟ, ರಸ್ತೆಗೆ ಬಳಸುವ ಕಂಕರ್ ಸೇರಿದಂತೆ ಅಗತ್ಯ ವಸ್ತುಗಳನ್ನು ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿಲ್ಲ. ಕೆಲಸ ನಡೆಯುವ ಸ್ಥಳದಲ್ಲಿ ಅಧಿಕಾರಿ ಇಲ್ಲದ ಕಾರಣದಿಂದಾಗಿ ರಸ್ತೆ ಕಾಮಗಾರಿ ಬೇಕಾಬಿಟ್ಟಿ ನಡೆಸಲಾಗುತ್ತಿದೆ ಎನ್ನುತ್ತಾರೆ ಸ್ಥಳೀಯರು.
ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಅಪವಿತ್ರ ಮೈತ್ರಿಯಿಂದಾಗಿ ಕಾಮಗಾರಿ ಕಳಪೆಯಾಗಿ ನಡೆಯುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ.

ಕವರವಾಡಿ ಗ್ರಾಮಕ್ಕೆ ಉತ್ತಮ ಗುಣಮಟ್ಟದ ರಸ್ತೆ ನಿರ್ಮಾಣವಾಗಬೇಕು ಎನ್ನುವ ದೃಷ್ಟಿಯಿಂದ ಸಚಿವ ಖರ್ಗೆಗೆ ಅನುದಾನ ನೀಡಿದ್ದಾರೆ. ಆದರೆ, ಅಧಿಕಾರಿಗಳ ಹಾಗೂ ಗುತ್ತಿಗೇದಾರನ ಬೇಜವಾಬ್ದಾರಿಯಿಂದ ಕಾಮಗಾರಿ ಮಾತ್ರ ಅರೆಬರೆಯಾಗಿ ನಡೆಯುತ್ತಿದೆ. ಗುಣಮಟ್ಟವಿಲ್ಲದ ಕಾಮಗಾರಿ ನಿರ್ಮಿಸಿದರೆ ಆರೇ ತಿಂಗಳಲ್ಲಿ ರಸ್ತೆ ಕಿತ್ತು ಹೋಗುವ ಸಂಭವವಿರುತ್ತದೆ. ಮತ್ತದೇ ತಗ್ಗು ದಿಣ್ಣೆಗಳ ರಸ್ತೆಯಲ್ಲಿ ಓಡಾಡುವ ಅನಿವಾರ್ಯತೆ ಸ್ಥಳೀಯ ಜನರಿಗೆ ಬರುತ್ತದೆ. ಗುಣಮಟ್ಟದ ರಸ್ತೆ ನಿರ್ಮಾಣಕ್ಕೆ ಆದ್ಯತೆ ನೀಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.


ಪ್ರಾರಂಭ ಹಂತದಲ್ಲೇ ಡಾಂಬರೀಕರಣ ರಸ್ತೆ ಕಾಮಗಾರಿ ಗುಣಮಟ್ಟದಿಂದ ನಡೆಯುತ್ತಿಲ್ಲ. ರಸ್ತೆ ಅಗೆದು, ಜಲ್ಲಿಕಲ್ಲು ಮುರಮು ಹಾಕಿ ರಸ್ತೆ ನಿರ್ಮಿಸಬೇಕು. ಆದರೆ, ಇಲ್ಲಿ ಆ ಕೆಲಸ ನಡೆಯುತ್ತಿಲ್ಲ. ಇಲಾಖೆ ಅಧಿಕಾರಿಗಳ ನಿರ್ಲಕ್ಷ, ಗುತ್ತಿಗೆದಾರನ ಬೇಜವಾಬ್ದಾರಿಯಿಂದ ಗುಣಮಟ್ಟ ಕಳೆದುಕೊಂಡಿರುವ ಮಣ್ಣು ಹಾಕಿ ರಸ್ತೆ ನಿರ್ಮಿಸಲಾಗುತ್ತಿದೆ. ಒಂದು ವೇಳೆ ಇದೇ ರೀತಿ ಮುಂದುವರೆಸಿದರೆ ರಸ್ತೆ ತಡೆದು ಪ್ರತಿಭಟನೆ ಮಾಡಬೇಕಾಗುತ್ತದೆ.

  • ಸಿದ್ದು ತಳವಾರ
    ಯುವ ಮುಖಂಡ ಕಮರವಾಡಿ.