ಗುಣಮಟ್ಟದ ಹಿಪ್ಪುನೇರಳೆ ಬೆಳೆಯಲು ತಜ್ಞರಿಂದ ರೈತರಿಗೆ ಸಲಹೆ

ಕೋಲಾರ,ಆ.೪- ಅತಿ ಹೆಚ್ಚು ಜೈವಿಕ ಗೊಬ್ಬರಗಳ ಬಳಕೆ, ತ್ಯಾಜ್ಯ ವಸ್ತುಗಳಿಂದ ಕಾಂಪೋಸ್ಟ್ ಗೊಬ್ಬರ ತಯಾರಿಕೆಗೆ ಒತ್ತು ನೀಡುವ ಮೂಲಕ ಗುಣಮಟ್ಟದ ಹಿಪ್ಪುನೇರಳೆ ಬೆಳೆದು ಲಾಭದಾಯಕ ಬೈವೋಲ್ಟೈನ್ ಗೂಡು ಉತ್ಪಾದಿಸಲು ಮುಂದಾಗಿ ಎಂದು ಚನ್ನಪಟ್ಟಣ ರೇಷ್ಮೆ ತರಬೇತಿ ಸಂಸ್ಥೆಯ ನಿರ್ದೇಶಕಿ ಇಂದ್ರಾಣಿ ಕರೆ ನೀಡಿದರು.
ತಾಲ್ಲೂಕಿನ ವೇಮಗಲ್ ತಾಂತ್ರಿಕ ಸೇವಾ ಕೇಂದ್ರದ ವ್ಯಾಪ್ತಿಯ ಬೀಚಗೊಂಡಹಳ್ಳಿ ಗ್ರಾಮದಲ್ಲಿ ರೈತರಿಗೆ ಬೈವೋಟೈನ್ ಹುಳುಸಾಕಾಣಿಕೆ, ಜೈವಿಕ ಗೊಬ್ಬರಗಳ ಬಳಕೆ ತ್ಯಾಜ್ಯ ವಸ್ತುಗಳಿಂದ ಕಾಂಪೋಸ್ಟ್ ಗೊಬ್ಬರ ತಯಾರಿಕೆ ಕುರಿತು ಹಮ್ಮಿಕೊಂಡಿದ್ದ ಕಾರ್ಯಾಗಾರದ ಹಿನ್ನಲೆಯಲ್ಲಿ ರೈತರ ತೋಟಗಳಿಗೆ ಭೇಟಿ ನೀಡಿ ಅವರು ಮಾತನಾಡಿದರು.
ಇಂದು ಕಡಿಮೆ ಅವಧಿಯಲ್ಲಿ ಅತಿ ಹೆಚ್ಚು ಲಾಭ ತರುವ ರೇಷ್ಮೆ ಹುಳು ಸಾಕಾಣೆ ಗ್ರಾಮೀಣ ರೈತರ ಆರ್ಥಿಕ ಜೀವಾಳವಾಗಿದೆ, ಈ ಉದ್ಯಮದಲ್ಲಿ ಕಡಿಮೆ ಖರ್ಚಿನಿಂದ ಹೆಚ್ಚಿನ ಲಾಭ ಪಡೆಯುವತ್ತ ರೈತರ ಚಿಂತನೆ ಅಗತ್ಯ ಎಂದ ಅವರು, ಇಲಾಖೆ ನೀಡುವ ತಾಂತ್ರಿಕ ಸೌಲಭ್ಯ ಪಡೆದುಕೊಂಡು ಗುಣಮಟ್ಟದ ಬೈವೋಲ್ಟೈನ್ ರೇಷ್ಮೆ ಗೂಡು ಉತ್ಪಾದನೆಗೆ ಆದ್ಯತೆ ನೀಡಬೇಕು ಎಂದರು.
ಅತಿಯಾದ ರಸಾಯನಿಕ ಗೊಬ್ಬರಗಳ ಬಳಕೆಯಿಂದ ಮಣ್ಣಿನ ಗುಣಮಟ್ಟ ಹಾಳಾಗುತ್ತದೆ ಆದ್ದರಿಂದ ರೈತರು, ಕಾಂಪೋಸ್ಟ್ ಹಾಗೂ ಜೈವಿಕ ಗೊಬ್ಬರಗಳ ಬಳಕೆಗೆ ಒತ್ತು ನೀಡಬೇಕು, ಇಡೀ ಉದ್ಯಮವನ್ನು ಲಾಭದಾಯಕವಾಗಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಚನ್ನಪಟ್ಟಣ ರೇಷ್ಮೆ ತರಬೇತಿ ಸಂಸ್ಥೆಯ ಸಹಾಯಕ ನಿರ್ದೇಶಕ ಪಶುಪತಿಗಿರಿ ಮಾತನಾಡಿ, ರೈತರಿಗೆ ಹಿಪ್ಪು ನೇರಳೆ ಸೊಪ್ಪಿನ ಮಹತ್ವ ಬಲಿತ ಹುಳು ಸಾಕಾಣಿಕೆ ಮತ್ತು ಸೋಂಕುನಿವಾರಣೆ ಮತ್ತು ಉಷ್ಣಾಂಶ-ತೇವಾಂಶ, ಗಾಳಿ-ಬೆಳಕು ಮಹತ್ವದ ಬಗ್ಗೆ ಉಪನ್ಯಾಸ ನೀಡಿದರು.
ಗುಣಮಟ್ಟದ ಹಿಪ್ಪುನೇರಳೆ ಸೊಪ್ಪು ಬೆಳೆಯುವುದರಿಂದ ಮಾತ್ರ ಅತಿ ಹೆಚ್ಚಿನ ಗೂಡು ಉತ್ಪಾದನೆ ಸಾಧ್ಯ ಎಂದ ಅವರು, ರೈತರು ಹುಳು ಸಾಕಾಣಿಕೆ ಮನೆಯಲ್ಲಿ ಸೋಂಕು ನಿವಾರಣೆ ಕೈಗೊಳ್ಳುವುದು, ಅಗತ್ಯ ಉಷ್ಣಾಂಶ ಹಾಗೂ ತೇವಾಂಶ ಕಾಪಾಡಬೇಕು ಎಂದ ಅವರು, ಬೈವೋಲ್ಟೈನ್ ಹುಳು ಸಾಕಾಣೆಯ ಮೂಲಕ ಲಾಭ ಗಳಿಸಿ ಎಂದರು.
ವೇಮಗಲ್ ರೇಷ್ಮೆ ವಿಸ್ತರಣಾಧಿಕಾರಿ ಎನ್.ಚಂದ್ರಶೇಖರ ಗೌಡ ಪ್ರಾಸ್ತಾವಿಕವಾಗಿ ಮಾತನಾಡಿ, ರೇಷ್ಮೆ ಗೂಡು ಉತ್ಪಾದನೆಯಲ್ಲಿ ಕಡಿಮೆ ವೆಚ್ಚದಲ್ಲಿ ಗೂಡು ಉತ್ಪಾದನೆ ಮಾಡಬಹುದು ಹಾಗೂ ನೂತನ ತಾಂತ್ರಿಕತೆಗಳು ಮತ್ತು ಯಂತ್ರೋಪಕರಣಗಳ ಬಳಕೆ ಬಗ್ಗೆ ರೈತರು ಅರಿವು ಪಡೆದುಕೊಳ್ಳಬೇಕು ಎಂದರು.
ರೇಷ್ಮೆ ನಿರೀಕ್ಷಕರು ಸಿ.ಜಿ.ಪಾಟೀಲ್ ಮಾತನಾಡಿ, ಪ್ರಸ್ತುತ ಸನ್ನಿವೇಶದಲ್ಲಿ ಅಳವಡಿಸಬೇಕಾದ ಅಗತ್ಯ ನೂತನ ತಾಂತ್ರಿಕತೆಗಳ ಬಗ್ಗೆ ಹಾಗೂ ನೂತನ ವಿ೧ ತೋಟ ನಿರ್ವಹಣೆ ಬಗ್ಗೆ ಹಾಗೂ ರೇಷ್ಮೆ ಗೂಡು ಧಾರಣೆ ಉತ್ತಮವಾಗಿದ್ದು ಈ ಸಮಯದಲ್ಲಿ ರೈತರು ಹೆಚ್ಚು ಕಾಳಜಿ ವಹಿಸಿ ದ್ವಿತಳಿ ರೇಷ್ಮೆ ಗೂಡು ಉತ್ಪಾದಿಸಲು ಅರಿವು ಮೂಡಿಸಿದರು
ಈ ಸಂದಂರ್ಭದಲ್ಲಿ ವೇಮಗಲ್ ರೇಷ್ಮೆ ರೈತ ಉತ್ಪಾದಕ ಸಂಸ್ಥೆಯ ಸಿ.ಇ.ಒ ರಾದ ಶ್ರೀ ಸಂತೋಷ ಮತ್ತು ಸಿ ವೆಂಕಟರವಣಪ್ಪ, ಪ್ರಗತಿ ಪರ ರೈತರಾದಂತಹ ಸಿ ಮುನಿಯಪ್ಪ, ಮುಕುಂದ, ಸಿ.ಕೆ.ನಾರಾಯಣಸ್ವಾಮಿ, ಮುನಿಶಾಮಿಗೌಡ ಮುಂತಾದ ರೈತರುಗಳು ಭಾಗವಹಿಸಿದರು.
ನುಸಿ ಪೀಡೆಯ
ನಿಯಂತ್ರಣಕ್ಕೆ ಸಲಹೆ
ಇದೇ ಸಂದರ್ಭದಲ್ಲಿ ರೇಷ್ಮೆ ಇಲಾಖೆ ತಜ್ಞರು ರೈತರಿಗೆ ಜಿಲ್ಲೆಯಲ್ಲಿ ಹಿಪ್ಪುನೇರಳೆ ಸೊಪ್ಪಿಗೆ ಕಾಡುತ್ತಿರುವ ಮೈಟ್ಸ್‌ನುಸಿ ಪೀಡೆಯ ನಿಯಂತ್ರಣಕ್ಕಾಗಿ ರೇಷ್ಮೆ ಬೆಳೆಗಾರರು ಸಾಮೂಹಿಕವಾಗಿ ತೋಟಕಟಾವಾದ ೮-೧೦ ದಿನದಲ್ಲಿ ರೋಗರ್ ಕೀಟನಾಕಶವನ್ನು ಸಿಂಪಡಿಸುವುದು. ಮೊದಲ ಸಿಂಪರಣೆ ಮಾಡಿದ ೧೦ ದಿನದ ನಂತರ ಓಮೈಟ್ ಅಥವ ಮ್ಯಾಜಿಸ್ಟರ್ ಅಥವ ಕುನೋಚಿ ನುಸಿ ನಾಶಕವನ್ನು ಎಲೆಯ ಕೆಳಭಾಗ ಚೆನ್ನಾಗಿ ನೆನೆಯುವಂತೆ ಸಿಂಪಡಿಸುವುದು ಇದಾದ ಒಂದು ವಾರದ ನಂತರ ಬಹುಪೋಷಕಾಂಶಯುಕ್ತ ದ್ರಾವಣವಾದ ಸಿರಿಬೂಸ್ಟ್ ಪೋಷಣ್ ಬೆರೆಸಿ ಹಿಪ್ಪುನೇರಳೆ ತೋಟಕ್ಕೆ ಸಿಂಪಡಿಸುವುದರಿಂದ ಸೊಪ್ಪಿನ ಗುಟಮಟ್ಟವನ್ನು ಕಾಪಾಡಬಹುದು ಎಂದು ಮಾರ್ಗದರ್ಶನ ನೀಡಿದರು.
ಇದಾದ ೪೦ ದಿನಗಳ ನಂತರ ಹಿಪ್ಪುನೇರಳೆ ತೋಟದಲ್ಲಿ ಮೈಟ್ಸ್‌ನುಸಿಯ ಹಾವಳಿ ಇನ್ನು ಇದ್ದಲ್ಲಿ ವೆಟ್ಟಬಲ್ ಸಲ್ಪರ್ (೩ ಗ್ರಾಂ ಪ್ರತಿ ಲೀಟರ್ ನೀರಿಗೆ) ದ್ರಾವಣ ಸಿದ್ದಪಡಿಸಿ ಹಿಪ್ಪುನೇರಳೆ ತೋಟಕ್ಕೆ ಸಿಂಪಡಿಸುವುದು. ಯಾವುದೇ ನುಸಿ ನಾಶಕ ಸಿಂಪಡಿಸಿದ ೨೦ ದಿನಗಳ ನಂತರ ಹಿಪ್ಪುನೇರಳೆ ಸೊಪ್ಪನ್ನು ರೇಷ್ಮೆ ಹುಳುಗಳಿಗೆ ನೀಡುವುದು. ರೇಷ್ಮೆ ಬೆಳೆಗಾರರು ತುಂತುರು ಹನಿನೀರಾವರಿ ಅಥವ ಲೇಸರ್ ಇರಿಗೇಶನ್ ಸೌಲಭ್ಯವಿದ್ದಲ್ಲಿ ಹಿಪ್ಪುನೇರಳೆ ತೋಟಕ್ಕೆ ಬಳಸುವ ಮುಖಾಂತರ ಮೈಟ್ಸ್ ನುಸಿ ಪೀಡೆಯನ್ನು ಪರಿಣಾಮಕಾರಿಯಾಗಿ ನಿರ್ವಹಣೆ ಮಾಡಬಹುದೆಂದು ರೈತರಿಗೆ ಮಾಹಿತಿ ನೀಡಿದರು. ಬಿರುಸಿನ ಮಳೆಯಾದಲ್ಲಿ ಮೈಟ್ಸ್ ನುಸಿಯು ನೀರಿನಲ್ಲಿ ಕೊಚ್ಚಿಹೋಗುವುದರಿಂದ ಯಾವುದೇ ನುಸಿನಾಶಕ ಬಳಸುವ ಅಗತ್ಯವಿರುವುದಿಲ್ಲ. ಮಳೆಯಾಗದೆ ಇದ್ದ ಪಕ್ಷದಲ್ಲಿ ಮೇಲಿನಂತೆ ನಿರ್ವಹಣಾ ಕ್ರಮಗಳನ್ನು ರೈತರು ಕಡ್ಡಾಯವಾಗಿ ಮಾಡತಕ್ಕದ್ದು ಎಂದು ತಿಳಿಸಿದರು.