ಗುಣಮಟ್ಟದ ಶಿಕ್ಷಣ ಹಾಗೂ ದೂರದೃಷ್ಟಿ ಯೋಜನೆಗಳಿಗೆ ಆದ್ಯತೆ

ಚಿತ್ರದುರ್ಗ ನ. 20; ಚಿತ್ರದುರ್ಗದ ಸರ್ಕಾರಿ ವಿಜ್ಞಾನ ಕಾಲೇಜಿಗೆ ಇದೇ ನ. 29 ಮತ್ತು 30 ರಂದು ರಾಷ್ಟ್ರೀಯ ಮೌಲ್ಯಮಾಪನ ಹಾಗೂ ಅರ್ಹತಾ ಮಂಡಳಿ (ನ್ಯಾಕ್) ತಂಡ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದು, ಕಾಲೇಜಿನಲ್ಲಿ ಒದಗಿಸಲಾಗುತ್ತಿರುವ ಗುಣಮಟ್ಟದ ಶಿಕ್ಷಣ ಹಾಗೂ ನಿಗದಿಪಡಿಸಿರುವ ದೂರದೃಷ್ಟಿ ಯೋಜನೆಗಳ ಕುರಿತು ತಂಡಕ್ಕೆ ಮನವರಿಕೆ ಮಾಡಿಕೊಡಲಾಗುವುದು ಎಂದು ಕಾಲೇಜಿನ ಪ್ರಾಂಶುಪಾಲ ಎನ್.ಹೆಚ್. ಹನುಮಂತರಾಯ ಅವರು ಹೇಳಿದರು.ಈ ಕುರಿತು ಸರ್ಕಾರಿ ವಿಜ್ಞಾನ ಕಾಲೇಜಿನ ಸಭಾಂಗಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಷ್ಟ್ರೀಯ ಮೌಲ್ಯಮಾಪನ ಹಾಗೂ ಅರ್ಹತಾ ಮಂಡಳಿಯ (ನ್ಯಾಕ್) ನಾಲ್ಕನೆ ಆವೃತ್ತಿಯ ಭೇಟಿ ಇದಾಗಿದ್ದು, ಈ ಹಿಂದಿನ ಅವಧಿಯಲ್ಲಿ ಸರ್ಕಾರಿ ವಿಜ್ಞಾನ ಕಾಲೇಜು ನ್ಯಾಕ್‍ನಿಂದ ಎ-ದರ್ಜೆಯನ್ನು ಪಡೆದುಕೊಂಡಿದೆ.  1948 ರಲ್ಲಿ ಇಂಟರ್‍ಮೀಡಿಯೇಟ್ ಕಾಲೇಜಾಗಿ ಪ್ರಾರಂಭವಾದ ಈ ಕಾಲೇಜು, ಬಳಿಕ 1957 ರಲ್ಲಿ ಪದವಿ ಕಾಲೇಜು ಆಗಿ ಉನ್ನತ ದರ್ಜೆಗೇರಿ ವಿಜ್ಞಾನ, ಕಲಾ ಹಾಗೂ ವಾಣಿಜ್ಯ ವಿಭಾಗಗಳಿದ್ದವು.  1973 ರಲ್ಲಿ ಎಲ್ಲ ವಿಭಾಗಗಳು ಪ್ರತ್ಯೇಕಗೊಂಡ ಬಳಿಕ ಈ ಕಾಲೇಜು ಸಂಪೂರ್ಣವಾಗಿ ವಿಜ್ಞಾನ ಕಾಲೇಜಾಗಿ ವಿಭಜಿತಗೊಂಡು, ಆಗಿನಿಂದಲೂ ಅತ್ಯುತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಾ ಬಂದಿದೆ.  ಸದ್ಯ ದಾವಣಗೆರೆ ವಿಶ್ವವಿದ್ಯಾಲಯದ ಅಧೀನದಲ್ಲಿ ಕಾಲೇಜು ಕಾರ್ಯನಿರ್ವಹಿಸುತ್ತಿದ್ದು, 2007 ರಿಂದ ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಹಾಗೂ ಜೀವಶಾಸ್ತ್ರ ವಿಭಾಗದಲ್ಲಿ ಸ್ನಾತಕೋತ್ತರ ಶಿಕ್ಷಣವನ್ನೂ ನೀಡಲಾಗುತ್ತಿದೆ. ಕಾಲೇಜಿನಿಂದ ದೂರದೃಷ್ಟಿ ಯೋಜನೆಯನ್ನು ಹಾಕಿಕೊಂಡು, ಉತ್ತಮ ಉದ್ದೇಶವನ್ನು ಹೊಂದಲಾಗಿದ್ದು, ಉತ್ಪಾದಕ ಶಿಕ್ಷಣವನ್ನು ತರಲು ಮತ್ತು ಉನ್ನತ ಶಿಕ್ಷಣದ ಮಾದರಿಯನ್ನು ಬೇಡಿಕೆಗಳ ಪೂರೈಸುವ ನವೀನ ಬೋಧನಾ ಕೌಶಲ್ಯಗಳನ್ನು ಕಾರ್ಯಗತಗೊಳಿಸಲು ಮತ್ತು ಆ ಮೂಲಕ ಸಮಾಜವನ್ನು ಗ್ರಹಿಸಲು ಸಮಗ್ರ ದೃಷ್ಟಿಕೋನವನ್ನು ನೀಡುವ ಉದ್ದೇಶ ಹೊಂದಲಾಗಿದೆ.  ಇದರ ಜೊತೆಗೆ  ಅಸ್ತಿತ್ವದಲ್ಲಿರುವ ಸಾಮಾಜಿಕ ಸಮಸ್ಯೆಗಳನ್ನು ಎದುರಿಸಲು ಗುಣಮಟ್ಟದ ಶಿಕ್ಷಣವನ್ನು ನೀಡಲು ಮತ್ತು ಸಂಭಾವ್ಯ ಮಾನವ ಸಂಪನ್ಮೂಲವನ್ನು ಅಭಿವೃದ್ಧಿಪಡಿಸಲು. ವಿದ್ಯಾರ್ಥಿಗಳಿಗೆ ಸಾಕಷ್ಟು ಸಂಶೋಧನೆ, ತಾಂತ್ರಿಕ ಮತ್ತು ವೃತ್ತಿಪರ ಕೌಶಲ್ಯಗಳನ್ನು ‘ಐಸಿಟಿ’ ಬಳಕೆಯಿಂದ ಕಲಿಸಿ, ಆ ಮೂಲಕ ಅವರನ್ನು ಬಹುಮುಖ ವ್ಯಕ್ತಿತ್ವವನ್ನಾಗಿ ಮಾಡುವ ಉದ್ದೇಶ ಹೊಂದಲಾಗಿದೆ.  ಕಲಿಯುವಂತಹ ಯುವಕÀರಿಗೆ ತಮ್ಮ ನವೀನ ವೈಜ್ಞಾನಿಕ ವಿಧಾನಗಳ ಮೂಲಕ ಸಾಮಾಜಿಕ ಸಮಸ್ಯೆಗಳನ್ನು ಪರಿಹರಿಸಲು ಉತ್ತಮ ಮಾರ್ಗಗಳು ಮತ್ತು ವಿಧಾನಗಳನ್ನು ಕಂಡುಕೊಳ್ಳಲು ಅವಕಾಶಗಳನ್ನು ಒದಗಿಸುವುದು, ನವೀನ ಸಂಶೋಧನಾ ಚಟುವಟಿಕೆಗಳನ್ನು ಉತ್ತೇಜಿಸಲು ಅಗತ್ಯವಾದ ಮೂಲಸೌಕರ್ಯಗಳನ್ನು ಹೆಚ್ಚಿಸಲು ಮತ್ತು ಅಗತ್ಯ ಪ್ರಯೋಗಾಲಯ ಸೌಲಭ್ಯಗಳನ್ನು ಒದಗಿಸುವುದು, ಜಾಗತಿಕ ಸವಾಲುಗಳನ್ನು ಎದುರಿಸಲು ಗುಣಮಟ್ಟದ ಶಿಕ್ಷಣದ ಮೂಲಕ ಅತ್ಯುತ್ತಮ ಮಾನವಶಕ್ತಿಯನ್ನು ಅಭಿವೃದ್ಧಿಪಡಿಸುವುದು, ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಕಲ್ಪಿಸಲು ವೃತ್ತಿ ಮಾರ್ಗದರ್ಶನ ನೀಡುವುದು, ಅಲ್ಲದೆ ಪರಿಸರ ಜಾಗೃತಿ ಮೂಡಿಸಿ, ಜವಾಬ್ದಾರಿಯುತ ನಾಗರಿಕರಾಗಲು ನೈತಿಕ ಮೌಲ್ಯಗಳನ್ನು ಬೆಳೆಸುವಂತಹ ಶಿಕ್ಷಣಕ್ಕೆ ಆದ್ಯತೆ ನೀಡಲು ಉದ್ದೇಶಿಸಲಾಗಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ಕುವೆಂಪು ವಿವಿಯ ಮೈಕ್ರೋಬಯೋಲಜಿ ವಿಭಾಗದ ಮುಖ್ಯಸ್ಥ ಡಾ. ಎನ್.ಬಿ. ತಿಪ್ಪೇಸ್ವಾಮಿ, ಬಯೋಕೆಮಿಸ್ಟ್ರಿ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ. ಪಿ. ನಿರಂಜನ್ ,  ಡಾ. ಡಿ. ನಾಗರಾಜ್ ಹಾಗೂ ಪ್ರಗತಿಪರ ರೈತರು ಮತ್ತು ಸಾಮಾಜಿಕ ಕಾರ್ಯಕರ್ತ ಡಾ. ಹಾಲೇಶ್ ನಾಯಕ್ ಸೇರಿದಂತೆ ಕಾಲೇಜಿನ ವಿವಿಧ ಅಧ್ಯಾಪಕ ವರ್ಗದವರು ಪಾಲ್ಗೊಂಡಿದ್ದರು.