ಕಲಬುರಗಿ:ಜೂ.10: ಶಿಕ್ಷಣವು ವ್ಯಕ್ತಿಗೆ ಜ್ಞಾನ, ಬುದ್ದಿ, ಸಂಸ್ಕಾರ, ಮಾನವೀಯತೆ, ಕೌಶಲಗಳನ್ನು ನೀಡಿ ರಾಷ್ಟ್ರದ ಸದೃಢ ಮಾನವ ಸಂಪನ್ಮೂಲ ನಿರ್ಮಾಣ ಮಾಡುವ ಮೂಲಕ ಸಾಮಾಜಿಕ ಪರಿವರ್ತನೆಯ ಪ್ರಮುಖ ಸಾಧನವಾಗಿದೆ. ಆದರೆ ಶಿಕ್ಷಣವು ಕೇವಲ ಪರಿಮಾಣಾತ್ಮಕವಾಗಿದ್ದರೆ ಪ್ರಯೋಜನೆಯಿಲ್ಲ. ಅದು ಗುಣಮಟ್ಟದಿಂದ ಕೂಡಿರಬೇಕು. ಗುಣಮಟ್ಟದ ಶಿಕ್ಷಣ ರಾಷ್ಟ್ರದ ಅಭಿವೃದ್ಧಿಗೆ ಪೂರಕವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಶಿಕ್ಷಣ ತಜ್ಞ ಭೀಮಶಾಂಕರ ಮುಲಗೆ ಅಭಿಪ್ರಾಯಪಟ್ಟರು.
ನಗರದ ಆಳಂದ ರಸ್ತೆಯ ಕಿಡ್ಜ್ ಅಡ್ಡಾ ಪೂರ್ವ ಪ್ರಾಥಮಿಕ ಶಾಲೆಯ ನೂತನ ಶಾಖೆಗೆ ಶುಕ್ರವಾರ ಸಂಜೆ ಜರುಗಿದ ಕಾರ್ಯಕ್ರಮದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.
ಶಾಲೆಯ ಮುಖ್ಯಸ್ಥ ಸಿದ್ದಯ್ಯ ಗುತ್ತೇದಾರ ಮಾತನಾಡಿ, ಗುಣಮಟ್ಟದ ಶಿಕ್ಷಣ ಶ್ರಮಬಲದ ಉತ್ಪಾದಕತೆಯನ್ನು ಹೆಚ್ಚಿಸುತ್ತದೆ. ಜನರಿಗೆ ಬದುಕುವ ವಿಧಾನವನ್ನು ಕಲಿಸಿಕೊಡುತ್ತದೆ. ಇದರಿಂದ ಜನರು ಅಭಿವೃದ್ಧಿಯ ಚಟುವಟಿಕೆಗಳಲ್ಲಿ ನೇರವಾಗಿ ಭಾಗವಹಿಸುತ್ತಾರೆ. ಸಂಶೋಧನೆ ಮತ್ತು ಆವಿಷ್ಕಾರಗಳು ಹೆಚ್ಚಾಗಿ ಜರುಗಿ, ರಾಷ್ಟ್ರದ ಸರ್ವಾಂಗೀಣ ಪ್ರಗತಿಯಾಗುತ್ತದೆ. ಹೀಗಾಗಿ ಪ್ರತಿಯೊಬ್ಬರು ಕಡ್ಡಾಯವಾಗಿ ಶಿಕ್ಷಣವನ್ನು ಪಡೆಯಬೇಕು. ಕಿಡ್ಜ್ ಶಿಕ್ಷಣ ಸಂಸ್ಥೆ ಗುಣಮಟ್ಟದಿಂದ ರಾಷ್ಟ್ರದಲ್ಲಿ ಹೆಸರು ಗಳಿಸಿದೆ. ಈ ಪ್ರದೇಶದವರು ಶಿಕ್ಷಣ ಸಂಸ್ಥೆಯ ಸದುಪಯೋಗ ಮಾಡಿಕೊಳ್ಳಲು ತಿಳಿಸಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕ ಎಚ್.ಬಿ.ಪಾಟೀಲ, ಸಮಾಜ ಸೇವಕ ಶಿವಕರಣ ಗಣಜಲಖೇಡ್, ಕಸಾಪ ಉತ್ತರ ವಲಯದ ಗೌರವ ಅಧ್ಯಕ್ಷ ಶಿವಯೋಗಪ್ಪ ಬಿರಾದಾರ, ನಿವೃತ್ತ ಮುಖ್ಯ ಶಿಕ್ಷಕ ಬಸಯ್ಯಸ್ವಾಮಿ ಹೊದಲೂರ, ಶಾಲೆಯ ಮುಖ್ಯ ಶಿಕ್ಷಕಿ ಅರ್ಚನಾ ಎಸ್.ಗುತ್ತೇದಾರ, ಪ್ರಮುಖರಾದ ಸಾಯಿಪ್ರಕಾಶ ಮುನಿ, ಈರಣ್ಣ ಗುಂಡಗುರ್ತಿ, ಸೈಫನ್ ನದಾಫ್ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.