ರಾಮದುರ್ಗ,ಜೂ3 : ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ದೇಶದ ಉತ್ತಮ ಪ್ರಜೆಗಳ ನಿರ್ಮಾಣ ಮಾಡುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದ್ದು ಪ್ರತಿಯೊಬ್ಬರು ಶಿಸ್ತನ್ನು ಅಳವಡಿಸಿಕೊಂಡು ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಶಾಸಕ ಅಶೋಕ ಪಟ್ಟಣ ಹೇಳಿದರು.
ಪಟ್ಟಣದ ವಿದ್ಯಾಚೇತನ ಆವರಣದ ಶಾಸಕರ ಮಾದರಿ ಶಾಲೆಯಲ್ಲಿ ತಾಲೂಕಾ ಮಟ್ಟದ ಗುಣಾತ್ಮಕ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವಕ್ಕೆ ಚಾಲನೆ ಮತ್ತು ವಿದ್ಯಾರ್ಥಿಗಳಿಗೆ ಸಮವಸ್ತ್ರ, ಪಠ್ಯಪುಸ್ತಕ ವಿತರಣೆ ಮಾಡಿ ಮಾತನಡಿದ ಅವರು, ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಸರ್ಕಾರ ಹಲವಾರು ಯೋಜನೆ ಅನುಷ್ಠಾನ ಮಾಡುತ್ತಿದೆ ಅವುಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಖಾಸಗಿ ಶಾಲೆಗಳಿಗಿಂತ ಉತ್ತಮ ರೀತಿಯಲ್ಲಿ ಹೊಸ ಶಾಲಾ ಕಟ್ಟಡ ನಿರ್ಮಾಣ ಮತ್ತು ಹೈಟೆಕ್ ಶೌಚಾಲಯ ನಿರ್ಮಾಣ ಮಾಡುವ ಮೂಲಕ ಅಗತ್ಯ ಮೂಲಭೂರ ಸೌಲಭ್ಯ ಕಲ್ಪಿಸಲು ಆದ್ಯತೆ ನೀಡುವದಾಗಿ ಹೇಳಿದರಲ್ಲದೆ ಅತಿಥಿ ಶಿಕ್ಷಕರ ಹೆಚ್ಚುವರಿ ನೇಮಕಾತಿಗೆ ಕ್ರಮಕೈಗೊಳ್ಳುವದಾಗಿ ಹೇಳಿದರು.
ಶಿಕ್ಷಕರು ಮೊದಲು ಶಿಸ್ತು ಅಳವಡಿಸಿಕೊಂಡು ಸರಿಯಾದ ಸಮಯಕ್ಕೆ ಶಾಲೆಗೆ ಬರಬೇಕು ಅಂದರೆ ಮಾತ್ರ ವಿದ್ಯಾರ್ಥಿಗಳು ಸಹಿತ ಶಿಸ್ತಿನಿಂದ ಶಾಲೆಗೆ ಆಗಮಿಸಿ ಜೀವನದಲ್ಲಿ ಶಿಸ್ತು ರೂಡಿಸಿಕೊಳ್ಳಲು ಸಾಧ್ಯವಿದೆ. ರಾಮದುರ್ಗ ತಾಲೂಕನ್ನು ಶೈಕ್ಷಣಿಕ ವಿಷಯದಲ್ಲಿ ರಾಜ್ಯದಲ್ಲಿ ಮಾದರಿಯಾಗಲು ಎಲ್ಲರೂ ಶ್ರಮಿಸಬೇಕು ಎಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎನ್. ವೈ. ಕುಂದರಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಪುರಸಭೆ ಉಪಾಧ್ಯಕ್ಷ ನಾಗರಾಜ ಕಟ್ಟಿಮನಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ನಿಜಗುಲಿ, ದೈಹಿಕ ಶಿಕ್ಷಣಾಧಿಕಾರಿ ಎಸ್.ಪಿ. ನಂದೀಶ, ಸತೀಶ ಜಿಣಗಾ, ಬಿಆರ್‍ಸಿ ಶೀಲವಂತಮಠ, ಅಕ್ಷರದಾಸೋಹ ಸಹಾಯಕ ನಿರ್ದೇಶಕ ಬಿ. ಎಫ್. ಮುನವಳ್ಳಿ, ಪಿ. ಡಿ. ಕಾಲವಾಡ ಸೇರಿದಂತೆ ಹಲವರಿದ್ದರು.
ಶಾಸಕರ ಮಾದರಿ ಶಾಲೆಯ ಮುಖ್ಯೋಪಾಧ್ಯಾಯ ವೈ. ವಿ. ಮಳಲಿ ಸ್ವಾಗತಿಸಿದರು. ಶಿಕ್ಷಕ ಶೇಖ ನಿರೂಪಿಸಿದರು. ಶಿಕ್ಷಕ ಹುರಕಡ್ಲಿ ವಂದಿಸಿದರು.