
ಚಿತ್ರದುರ್ಗ.ಏ.28: ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಶಿಕ್ಷಕರಿಗೆ ತರಬೇತಿಗಳು ಪೂರಕವಾಗುತ್ತವೆ ಎಂದು ಡಯಟ್ ಉಪನ್ಯಾಸಕ ಎಸ್. ಬಸವರಾಜು ಹೇಳಿದರು. ಡಯಟ್‌ನಲ್ಲಿ ನಡೆಯುವ ಶೈಕ್ಷಣಿಕ ಚಟುವಟಿಕೆಗಳ ಕುರಿತು ಮಾಹಿತಿ ಪಡೆಯಲು ಮಂಗಳವಾರ ಭೇಟಿ ನೀಡಿದ್ದ ನಗರದ ಸರಸ್ವತಿ ಕಾನೂನು ಕಾಲೇಜಿನ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿ ಮಾತನಾಡಿದ ಅವರು ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಡಯಟ್ ಸಂಸ್ಥೆಯ ಪಾತ್ರ ಮುಖ್ಯವಾಗಿದೆ. ಶಿಕ್ಷಕರು ತಮ್ಮ ಬೋಧನೆಯ ವಿಷಯದಲ್ಲಿ ಯಶಸ್ಸು ಗಳಿಸಲು ಆಳವಾದ ವಿಷಯ ಸಾಮರ್ಥ್ಯ ಹೊಂದಬೇಕು. ಗುಣಮಟ್ಟದ ಬೋಧನೆಗೆ, ಸುವ್ಯವಸ್ಥಿತ ತರಗತಿ ನಿರ್ವಹಣೆಗೆ ವೃತ್ತಿಪರ ಸಾಮರ್ಥ್ಯ ಅಭಿವೃದ್ದಿ ಪಡಿಸಲು ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರಿಗೆ ನಿಷ್ಠಾ, ನಾಯಕತ್ವ ತರಬೇತಿ, ನೂತನವಾಗಿ ನೇಮಕವಾದ ಶಿಕ್ಷಕರು ಮತ್ತು ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಿಗೆ ಬುನಾದಿ ತರಬೇತಿ, ಭಾಷೆ ಮತ್ತು ವಿಷಯವಾರು ತರಬೇತಿ, ಎನ್.ಸಿ.ಇ.ಆರ್.ಟಿ ಪಠ್ಯಾಧಾರಿತ ಗಣಿತ, ವಿಜ್ಞಾನ ವಿಷಯ ತರಬೇತಿ, ತಂತ್ರಜ್ಞಾನ ಆಧಾರಿತ ಕಲಿಕಾ ಕಾರ್ಯಕ್ರಮ(ಖಿಂಐP) ತರಬೇತಿ ನೀಡಲಾಗಿದೆ ಎಂದು ತಿಳಿಸಿದರು. ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವನೆ ಮತ್ತು ಸೃಜನಶೀಲತೆ ಬೆಳೆಸಲು ವಿಜ್ಞಾನ ನಾಟಕ, ವಿಚಾರ ಸಂಕಿರಣ, ಇನ್ಸ್ಫೈರ್ ಅವಾರ್ಡ್, ವಸ್ತು ಪ್ರದರ್ಶನ ಸ್ಪರ್ಧೆಗಳನ್ನು, ಸಾಹಿತ್ಯ ಮತ್ತು ಸಾಂಸ್ಕೃತಿಕ ಅಭಿರುಚಿ ಬೆಳೆಸಲು ಪ್ರಬಂಧ, ಜನಪದ ನೃತ್ಯ ಸ್ಪರ್ಧೆಗಳನ್ನು ನಡೆಸಲಾಗುವುದು ಎಂದು ತಿಳಿಸಿದರು.ಉಪನ್ಯಾಸಕ ಕೆ.ಎಂ.ನಾಗರಾಜು ಮಾತನಾಡಿ, ಡಯಟ್‌ನಲ್ಲಿ 6 ವಿಭಾಗಗಳಿದ್ದು ಜಿಲ್ಲಾ ಸಂಪನ್ಮೂಲ ಘಟಕ, ಸೇವಾಪೂರ್ವ ಶಿಕ್ಷಣ ವಿಭಾಗ, ಪಠ್ಯಕ್ರಮ ಸಾಮಗ್ರಿ ಅಭಿವೃದ್ಧಿ ಮತ್ತು ಮೌಲ್ಯಮಾಪನ, ಯೋಜನೆ ಮತ್ತು ನಿರ್ವಹಣೆ, ಸೇವಾನಿರತ ವಿಭಾಗ, ಶೈಕ್ಷಣಿಕ ತಂತ್ರಜ್ಞಾನ ವಿಭಾಗದ ಮೂಲಕ ತರಬೇತಿ ನೀಡಲಾಗುವುದು ಎಂದರು.ತಾಂತ್ರಿಕ ಸಹಾಯಕ ಕೆ.ಆರ್.ಲೋಕೇಶ್ ಮಾತನಾಡಿ, ಎನ್.ಎಂ.ಎA.ಎಸ್, ಎನ್.ಟಿ.ಎಸ್.ಇ, ಕೆ.ಓ.ಎಸ್. ಚಿತ್ರಕಲೆ, ಸಂಗೀತ, ತಾಳವಾದ್ಯ, ಬೆರಳಚ್ಚು ಮತ್ತು ಕಂಪ್ಯೂಟರ್ ಪರೀಕ್ಷೆ, ಬಿ.ಆರ್.ಸಿ, ಬಿ.ಆರ್.ಪಿ, ಸಿ.ಆರ್.ಪಿ ಆಯ್ಕೆ ಪರೀಕ್ಷೆ ಕುರಿತು ಮಾಹಿತಿ ನೀಡಿದರು.