ಗುಣಮಟ್ಟದ ಕಾಮಗಾರಿಗೆ ಒತ್ತು ನೀಡಲು ಸಲಹೆ

ಮಾಗಡಿ ನ,೬:ಕಾವೇರಿ ನೀರಾವರಿ ನಿಗಮದ ವತಿಯಿಂದ ನಡೆಯುತ್ತಿರುವ ಕಾಂಕ್ರಿಟ್ ರಸ್ತೆ ಕಾಮಗಾರಿಯನ್ನು ಶಾಸಕ ಎ.ಮಂಜುನಾಥ್ ವೀಕ್ಷಿಸಿದರು.
ಕಾವೇರಿ ನೀರಾವರಿ ನಿಗಮದ ವತಿಯಿಂದ ಸುಮಾರು ೮೦ ಲಕ್ಷ ರೂ. ವೆಚ್ಚದಲ್ಲಿ ತಾಲೂಕಿನ ಮತ್ತ, ನಾಯಕನಪಾಳ್ಯ ಹಾಗೂ ಮುತ್ತುರಾಯಸ್ವಾಮಿ ದೇವಾಲಯದ ಅವರಣದಲ್ಲಿ ಕಾಂಕ್ರಿಟ್ ರಸ್ತೆ ಕಾಮಗಾರಿಯನ್ನು ನಡೆಸಲಾಗುತ್ತಿದೆ.
ಈ ಗ್ರಾಮಗಳಲ್ಲಿ ಬಹಳಷ್ಟು ವರ್ಷಗಳಿಂದ ರಸ್ತೆ ಆಗಿರಲಿಲ್ಲ, ಇಲ್ಲಿರುವ ಮನೆಗಳಿಗೆ ದ್ವಿಚಕ್ರ ವಾಹನದಲ್ಲಿ ತೆರಳಲು ಆಗದ ಪರಿಸ್ಥಿತಿ ಇತ್ತು. ತಾವು ಚುನಾವಣೆ ಪ್ರಚಾರಕ್ಕೆ ಬಂದ ಸಮಯದಲ್ಲಿ ಇಲ್ಲಿನ ನಿವಾಸಿಗಳು ರಸ್ತೆ ನಿರ್ಮಿಸಿಕೊಡಬೇಕು ಎಂದು ಮನವಿ ಮಾಡಿದ್ದ ಹಿನ್ನಲೆಯಲ್ಲಿ ಕಾವೇರಿ ನೀರಾವರಿ ನಿಗಮದ ವತಿಯಿಂದ ಕಾಂಕ್ರಿಟ್ ರಸ್ತೆಯನ್ನು ಮಂಜೂರು ಮಾಡಿಸಲಾಗಿದೆ.
ಈ ಕಾಮಗಾರಿಯ ಗುತ್ತಿಗೆಯನ್ನು ಪಡೆದಿರುವವರು ಗುಣಮಟ್ಟದ ಕಾಮಗಾರಿಗೆ ಹೆಚ್ಚಿನ ಒತ್ತು ನೀಡುವ ಮೂಲಕ ಶಾಶ್ವತವಾದ ಕಾಮಗಾರಿಯನ್ನು ನಿರ್ವಹಿಸಬೇಕಿದ್ದು, ಈ ನಿಟ್ಟಿನಲ್ಲಿ ಗುತ್ತಿಗೆದಾರರು ಉತ್ತಮ ಗುಣಮಟ್ಟದ ಕಾಮಗಾರಿಯನ್ನು ನಡೆಸುತ್ತಿದ್ದಾರೆ ಎಂದು ಶಾಸಕ ಎ.ಮಂಜುನಾಥ್ ತಿಳಿಸಿದರು.