
ಬೀದರ್:ಎ.3: ಕುಟುಂಬದಲ್ಲಿ ಶಾಂತಿ ನೆಲೆಸಿದಲ್ಲಿ ಮಾತ್ರ ಕರ್ತವ್ಯದಲ್ಲಿ ಶ್ರೇಷ್ಠ ಹಾಗೂ ಗುಣಮಟ್ಟ ಕಾಪಾಡಿಕೊಳ್ಳಲು ಸಾಧ್ಯವಿದೆ ಎಂದು ಕರ್ನಾಟಕ ರಾಷ್ಟ್ರೀಯ ಶಿಕ್ಷಣ ಸಂಸ್ಥೆ ಉಪಾಧ್ಯಕ್ಷರಾದ ಬಿ.ಜಿ ಶಟಕಾರ ನುಡಿದರು.
ಶುಕ್ರವಾರ ಕರ್ನಾಟಕ ಕಾಲೇಜಿನಲ್ಲಿ 37 ವರ್ಷ ಸುಧೀರ್ಘ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿರುವ ಪ್ರೊ.ಎಸ್.ಪಿ ಜನವಾಡಕರ್ ಅವರ ಬೀಳ್ಕೊಡುವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಶಿಕ್ಷಕರಾದವರು ಯಾವತ್ತೂ ಸಂಬಳಕ್ಕಾಗಿ ದುಡಿಯದೇ ಕರ್ತವ್ಯ ನಿಷ್ಟೆ, ಗುಣಮಟ್ಟದ ಶಿಕ್ಷಣ ಬೋಧನೆ, ಗಾಂಭಿರ್ಯ, ಗುರುತ್ವ ಇವೆಲ್ಲವನ್ನು ಮೈಗೂಡಿಸಿಕೊಳ್ಳಬೇಕು. ಇತ್ತಿಚೀಗೆ ವಿದ್ಯಾರ್ಥಿಗಳಲ್ಲಿ ಪ್ರಶ್ನೆ ಮಾಡುವ ಮನೋಭಾವ ಕಡಿಮೆಯಾಗುತ್ತಿದ್ದು, ಅವರಲ್ಲಿ ಪ್ರಶ್ನಾತ್ಮಕ ಬುದ್ದಿಮತ್ಯ ಭರಿಸಬೇಕು. ಅಂಥ ಕೌಶಲ್ಯ ಪ್ರೊ.ಜನವಾಡಕರ್ ಅವರಲ್ಲಿ ಕಂಡು ಬಂದಿದ್ದು, ಅವರ ನಿವೃತ್ತ ಬದುಕು ಸುಖಮಯವಾಗಿರಲಿ, ಭಗವಂತನು ಅವರಿಗೆ ಹಾಗೂ ಅವರ ಪರಿವಾರದವರಿಗೆ ಆಯುಷ್ಯ, ಆರೋಗ್ಯ, ಸಿರಿ ಸಂಪತ್ತು ಕೊಟ್ಟು ಕಾಪಾಡಲಿ ಎಂದು ಹರಸುವುದಾಗಿ ಶಟಕಾರ ತಿಳಿಸಿದರು.
ಕರ್ನಾಟಕ ಕಾಲೇಜಿನ ಪ್ರಾಚಾರ್ಯ ಡಾ.ಮಲ್ಲಿಕಾರ್ಜುನ್ ಹಂಗರಗಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಜನವಾಡಕರ್ ಅವರು ಯಾವತ್ತೂ ದ್ವಂದ್ವ ನಿಲುವು ತಾಳಿದವರಲ್ಲ. ಧೃಢ ನಿರ್ಧಾರ ಮಾಡುವುದರಲ್ಲಿ ಅವರದು ಎತ್ತಿದ ಕೈ. ಪರಿಪೂರ್ಣ ಜ್ಞಾನವುಳ್ಳುವರಾಗಿರುವ ಇವರು, ಕರ್ತವ್ಯದಲ್ಲಿರುವ ತಮ್ಮ ಹಿರಿಯ ಹಾಗೂ ಕಿರಿಯ ಸಹೊದ್ಯೋಗಿಗಳಿಗೆ ಮರ್ಯಾದೆಯಿಂದ ಮಾತನಾಡಿಸುವರು. ಸದಾ ಧನಾತ್ಮಕ ಚಿಂತನೆಯುಳ್ಳವರಾಗಿರುವ ಇವರು ವಿದ್ಯಾರ್ಥಿಗಳನ್ನು ಪ್ರೀತಿ, ವಾತ್ಸಲ್ಯದಿಂದ ಕಾಣುವುದರ ಜೊತೆಗೆ ಸ್ನೇಹಪರವಾಗಿ ವರ್ತಿಸುವ ಸ್ವಭಾವ ಜನವಾಡಕರ್‍ದ್ದಾಗಿದೆ ಎಂದರು.
ಸನ್ಮಾನ ಸ್ವೀಕರಿಸಿದ ಪ್ರೊ.ಜನವಾಡಕರ್ ಮಾತನಾಡಿ, ತಾನು ಇಲ್ಲಿ ಕರ್ತವ್ಯಕ್ಕೆ ಹಾಜರಾದ ಸಂದರ್ಭದಲ್ಲಿ ಕೇವಲ ಒಂದು ಅಂತಸ್ತಿನ ಕಟ್ಟಡ ಮಾತ್ರ ಇತ್ತು. ಈಗ ಅದು ಹೆಮ್ಮರವಾಗಿ ಬೆಳೆದು ನಿಂತಿದೆ. ನಮ್ಮ ಸಹವರ್ತಿಗಳು ಬಹಳಷ್ಟು ಮಂದಿ ಈಗಾಗಲೇ ನಿವೃತ್ತಿ ಹೊಂದಿದ್ದಾರೆ. ಈಗ ನನ್ನ ನಿವೃತ್ತಿ ಕಾಲ ಬಂದಿದೆ. ಕಾಲೇಜು ಈಗಾಗಲೇ ಏ ಶ್ರೇಣಿಯಲ್ಲಿ ಅಭಿವೃದ್ಧಿ ಹೊಂದಿದ್ದು, ಕೆಲವೇ ದಿನಗಳಲ್ಲಿ ಈ ಕಾಲೇಜು ನ್ಯಾಕ್ ಗ್ರೇಡ್‍ಗೆ ಆಯ್ಕೆ ಆಗಲಿದೆ. ಇದರ ಸದುಪಯೋಗ ನನ್ನ ಎಲ್ಲ ಅಧ್ಯಾಪಕ ವೃಂದದವರು ಪಡೆದುಕೊಳ್ಳುವಂತೆ ಕಿವಿ ಮಾತು ಹೇಳಿದರು.
ಆಶೆಯ ನುಡಿ ನಿಡಿದಿರುವ ಉಪ ಪ್ರಾಚಾರ್ಯ ಡಾ.ಅನಿಲಕುಮಾರ ಚಿಕಮಣೂರ್ ಅವರು, ಪ್ರೊ.ಜನವಾಡಕರ್ ಅವರ ವ್ಯಕ್ತಿತ್ವ ವಿಶಾಲವಾದದ್ದು. ಅವರ ಸೌಮ್ಯ ಸ್ವಭಾವ ಎಲ್ಲರಿಗೆ ಹಿಡಿಸುವಂಥದ್ದು. ಅವರ ಬೋಧನಾ ಸಾಮಥ್ರ್ಯ ಶ್ರೇಷ್ಠವಿದ್ದ ಕಾರಣ ಅವರ ಬಹಳಷ್ಟು ಶಿಷ್ಯಂದಿರು ಇಂದು ದೇಶ, ವಿದೇಶಗಳಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಕಾಲೇಜಿನ ಪ್ರಾಧ್ಯಾಪಕರಾದ ಡಾ.ರಾಜೇಂದ್ರ ಬಿರಾದಾರ, ಡಾ.ಜಗನ್ನಾತ ಹೆಬ್ಬಾಳೆ, ಡಾ.ಎಮ್.ಎಸ್ ಚಲ್ವಾ, ಡಾ.ಡಿ.ಬಿ ಕಂಬಾರ, ಶ್ವೇತಾ ಪಾಟೀಲ ಹಾಗೂ ಇತರರು ಪ್ರೊ.ಜನವಾಡಕರ್ ಅವರೊಟ್ಟಿಗಿನ ಅನುಭಾವ ಹಂಚಿಕೊಂಡರು.
ಈ ಸಂದರ್ಭದಲ್ಲಿ ಪ್ರೊ.ಜನವಾಡಕರ್ ಹಾಗೂ ಅವರ ಧರ್ಮಪತ್ನಿ ಶೀಲಾ ಅವರನ್ನು ಸನ್ಮಾನಿಸಲಾಯಿತು.
ಆರಂಭದಲ್ಲಿ ರೇಣುಕಾ ಭಗವತಿ ಪ್ರಾತ್ರ್ನಿಸಿದರು. ಲಕ್ಷ್ಮೀ ಕುಂಬಾರ ಕಾರ್ಯಕ್ರಮ ನಿರೂಪಿಸಿ, ಜ್ಯೋತಿ ಪಾಟೀಲ ವಂದಿಸಿದರು.