ಗುಣಮಟ್ಟದಲ್ಲಿ ಕಾಮಗಾರಿಗಳನ್ನು ಕೈಗೊಳ್ಳಲು ಸಿಇಓ ಸೂಚನೆ.


ಬ್ಯಾಡಗಿ,ಮಾ.18: ತಾಲೂಕಿನ ಕುಮ್ಮೂರು, ಕಾಗಿನೆಲೆ ಹಾಗೂ ಮಾಸಣಗಿ ಗ್ರಾಮ ಪಂಚಾಯಿತಿಗಳಿಗೆ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ ಶ್ರೀಧರ್ ಅವರು ಭೇಟಿ ನೀಡಿ ವಿವಿಧ ಕಾಮಗಾರಿಗಳನ್ನು ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಗ್ರಾಪಂ ಅಧಿಕಾರಿಗಳಿಗೆ ಸೂಚನೆ ನೀಡಿ ಅವರು, ಕಾಮಗಾರಿಗಳ ಗುಣಮಟ್ಟದಲ್ಲಿ ಯಾವುದೇ ಕಾರಣಕ್ಕೂ ರಾಜಿ ಮಾಡಿಕೊಳ್ಳದೇ ಗುಣಮಟ್ಟದ ಕಾಮಗಾರಿ ಕೈಗೊಳ್ಳಬೇಕು. ಮುಖ್ಯವಾಗಿ ಶಾಲಾಭಿವೃದ್ಧಿ ಕಾಮಗಾರಿಗಳನ್ನು ಅತ್ಯಂತ ಉತ್ತಮ ಗುಣಮಟ್ಟದಿಂದ ನಿರ್ವಹಣೆ ಮಾಡಬೇಕು. ಹೆಚ್ಚುವರಿ ಕ್ರಿಯಾ ಯೋಜನೆಗಳ ಬದಲಿಗೆ ಹಿಂದಿನ ವರ್ಷದ ಕ್ರಿಯಾ ಯೋಜನೆಗಳಲ್ಲಿರುವ ಕಾಮಗಾರಿಗಳನ್ನು ಆದ್ಯತೆಯ ಮೇರೆಗೆ ಪೂರ್ಣಗೊಳಿಸಬೇಕು. ಮುಂದಿನ ಆರ್ಥಿಕ ವರ್ಷದ ಆರಂಭದಲ್ಲಿ ಹೊಸ ಕ್ರಿಯಾ ಯೋಜನೆಗಳನ್ನು ಸಲ್ಲಿಸುವಂತೆ ತಿಳಿಸಿದರು.
ಕುಮ್ಮೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ ಭೇಟಿ ನೀಡಿದ ಅವರು, ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಪ್ರಗತಿಯಲ್ಲಿರುವ ಬ್ಯಾಸ್ಕೆಟ್ ಬಾಲ್ ಮೈದಾನದ ಕಾಮಗಾರಿಯನ್ನು ಪರಿಶೀಲನೆ ನಡೆಸಿದರು.ನಂತರ 10ನೇ ತರಗತಿಯ ಮಕ್ಕಳೊಡನೆ ಸಮಾಲೋಚನೆ ನಡೆಸಿದ ಅವರು, ಗ್ರಾಮೀಣ ಭಾಗದ ಮಕ್ಕಳು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ದರ್ಜೆಯಲ್ಲಿ ಬರುವ ನಿಟ್ಟಿನಲ್ಲಿ ಉತ್ತಮ ಶಿಕ್ಷಣವನ್ನು ಪಡೆಯುವ ಮೂಲಕ ಪ್ರಯತ್ನಿಸುವಂತೆ ಮಕ್ಕಳಿಗೆ ಪ್ರೇರಣೆ ನೀಡಿದರು. ಗ್ರಾಮದಲ್ಲಿ ನರೇಗಾ ಯೋಜನೆಯಡಿ ಕೈಗೆತ್ತಿಕೊಂಡಿರುವ ಅಮೃತ ಸರೋವರದಡಿ ಹೊಂಡದ ಅಭಿವೃಧ್ದಿ ಹಾಗೂ ಎನ್.ಆರ್.ಎಲ್.ಎಂ ಶೆಡ್ ನಿರ್ಮಾಣ ಕಾಮಗಾರಿಗಳನ್ನು ಪರಿಶೀಲನೆ ನಡೆಸಿದ ಅವರು, ಮಕ್ಕಳ ಸರ್ವಾಂಗೀಣ ವ್ಯಕ್ತಿತ್ವ ಬೆಳವಣಿಗೆ ದೃಷ್ಠಿಯಿಂದ ಗ್ರಾಪಂ ವ್ಯಾಪ್ತಿಯ ಗ್ರಾಮಗಳಲ್ಲಿ ನರೇಗಾ ಯೋಜನೆಯಡಿ ಶಾಲಾ ಆಟದ ಮೈದಾನವನ್ನು ಅಭಿವೃದ್ಧಿ ಪಡಿಸುವಂತೆ ಸ್ಥಳದಲ್ಲಿದ್ದ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಗದಿಗೆಪ್ಪ ಕೊಪ್ಪದ ಅವರಿಗೆ ಸೂಚಿಸಿದರು.
ಕಾಗಿನೆಲೆ ಗ್ರಾಮದಲ್ಲಿ ಸರ್ಕಾರಿ ಆಸ್ಪತ್ರೆಯ ಉದ್ಯಾನವನ ಮತ್ತು ಶಾಲೆಯಲ್ಲಿ ಕೈಗೊಂಡಿರುವ ಶಾಲಾಭಿವೃದ್ಧಿ, ಸ್ಮಶಾನ ಭೂಮಿ ಅಭಿವೃದ್ದಿ, ಗ್ರಂಥಾಲಯ ಹಾಗೂ ಮಾಸಣಗಿ ಗ್ರಾಮದಲ್ಲಿ ಕೈಗೊಂಡಿರುವ ಶಾಲಾಭಿವೃದ್ಧಿ ಮತ್ತು ಕಾಂಕ್ರೀಟ್ ಕಾಲುವೆ ಕಾಮಗಾರಿಗಳನ್ನು ಪರಿಶೀಲನೆ ನಡೆಸಿದರಲ್ಲದೇ, ತಂತ್ರಾಂಶದಲ್ಲಿ ಗ್ರಾಮದ ಎಲ್ಲ ಫಲಾನುಭವಿಗಳ ಆಧಾರ ಕಾರ್ಡ್‍ಗಳು ಅಳವಡಿಕೆ ಕುರಿತು ಪರಿಶೀಲನೆ ನಡೆಸಿ, ಆಧಾರ ಕಾರ್ಡ್ ಅಳವಡಿಕೆಗೆ ಕೂಡಲೇ ಕ್ರಮ ವಹಿಸುವಂತೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ಕೆ.ಎಂ.ಮಲ್ಲಿಕಾರ್ಜುನ, ಎಡಿಪಿಸಿ ಮಾಲತೇಶ ನರೇಗಲ್, ನರೇಗಾ ಸಹಾಯಕ ನಿರ್ದೇಶಕ ಶಂಕರ ಕಿಚಡಿ, ಗ್ರಾಪಂ ಅಭಿವೃಧ್ದಿ ಅಧಿಕಾರಿಗಳಾದ ಬಸವರಾಜ ಬಣಕಾರ, ವಿಶ್ವನಾಥ ಕಟ್ಟೆಗೌಡ್ರ, ತಾಂತ್ರಿಕ ಸಹಾಯಕರಾದ ಸಂತೋಷ ನಾಯ್ಕ್, ಮಂಜುನಾಥ ದೊಡ್ದಗೌಡ್ರ, ರೇಖಾ ಹಿಂಡೇರ, ಮಾಹಿತಿ ಸಂಯೋಜಕ ಶಾನವಾಜ್ ಚಿಣಗಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.