ಗುಣಕಿ, ಕನ್ನಾಳ, ಮಿಂಚನಾಳ ಗ್ರಾಪಂ.ವ್ಯಾಪ್ತಿಯಲ್ಲಿ ಕೋವಿಡ್ ಜಾಗೃತಿ ಸಭೆ

ವಿಜಯಪುರ, ಮೇ.20-ಸಮೀಪದ ಗುಣಕಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಮಿಂಚನಾಳ ಗ್ರಾಮ, ಮಿಂಚನಾಳ ಎಲ್.ಟಿ, ಮಿಂಚನಾಳ ಆರ್.ಎಸ್, ಕನ್ನಾಳ ಎಲ್.ಟಿ, ಕನ್ನಾಳ ಗ್ರಾಮದಲ್ಲಿ ಮನೆ ಮನೆಗೆ ತೆರಳಿ ಕೋವಿಡ್ ತಪಾಸಣೆ ಹಮ್ಮಿಕೊಳ್ಳುವ ಹಿನ್ನೆಲೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ, ಅಂಗನವಾಡಿ, ಆಶಾ ಕಾರ್ಯಕರ್ತೆಯರಿಗೆ ಹಾಗು ವಾಟರ್ ಮ್ಯಾನ್ ಗಳಿಗೆ ಕೋವಿಡ್ ನಿಯಂತ್ರಣ ಕುರಿತಾದ ಜಾಗೃತಿ ಸಭೆ ನಡೆಯಿತು.
ಗ್ರಾಮಸ್ಥರಲ್ಲಿ ವ್ಯಾಪಕವಾಗಿ ಅರಿವು ಮೂಡಿಸುವ ಬಗೆಗೆ ಸಭೆಯಲ್ಲಿ ಆರೋಗ್ಯ ಕಾರ್ಯಕರ್ತರಿಗೆ ತಿಳುವಳಿಕೆ ನೀಡಿ ಮಾಸ್ಕ್, ಸೈನಿಟೈಜರ್, ಮಾತ್ರೆಗಳನ್ನು ವಿತರಿಸಲಾಯಿತು.
ಈ ಗ್ರಾಮಗಳಲ್ಲಿನ ಪ್ರತಿಯೊಂದು ಮನೆಮನೆಗೆ ತೆರಳಿ ಕೋವಿಡ್ ಸೋಂಕಿನ ತಪಾಸಣೆ ಸಮರ್ಪಕವಾಗಿ ನಡೆಸುವಂತೆ ಆಶಾ, ಅಂಗನವಾಡಿ ಕಾರ್ಯಕತೆ9ಯರಿಗೆ ಸೂಚಿಸಲಾಯಿತು. ಪ್ರತಿಯೊಂದು ಮನೆಯ ಎಲ್ಲ ಸದಸ್ಯರಿಗೆ ತಪಾಸಣೆ ಮಾಡಿ ಎಲ್ಲಾದರೂ ಕೋವಿಡ್ ಲಕ್ಷಣಗಳು ಕಂಡು ಬಂದಲ್ಲಿ ಅಂಥವರಿಗೆ ಪ್ರಥಮ ಚಿಕಿತ್ಸೆ ಹೇಗೆ ನೀಡಬೇಕು, ಔಷಧಿ ಹೇಗೆ ಒದಗಿಸಬೇಕು ಎಂಬುದರ ಬಗ್ಗೆ ಸಭೆಯಲ್ಲಿ ಮಾಹಿತಿ ಒದಗಿಸಲಾಯಿತು.
ಪಿಡಿಒ ಎಸ್.ಆಯ್. ಗದ್ದಗಿಮಠ ಮಾತನಾಡಿ, ಆಶಾ, ಅಂಗನವಾಡಿ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ ನೀಡಿ ಜನರ ಆರೋಗ್ಯ ಪರಿಶೀಲಿಸುವ ಕಾರ್ಯ ಕೈಗೊಂಡು ಜಾಗೃತಿ ಮೂಡಿಸಲ್ಲಿದ್ದಾರೆ. ನೆಗಡಿ, ಕೆಮ್ಮು, ಜ್ವರ ಮುಂತಾದ ಕೋವಿಡ್ ಲಕ್ಷಣಗಳು ಕಂಡು ಬಂದರೆ ಕೂಡಲೇ ಪಂಚಾಯಿತಿಗೆ ಮಾಹಿತಿ ನೀಡಬೇಕು. ಜನರು ಸ್ವಯಂ ಚಿಕಿತ್ಸೆ ಮಾಡಿಕೊಳ್ಳದೆ ಪರೀಕ್ಷೆಗೆ ಒಳಪಟ್ಟು ಸೂಕ್ತ ಚಿಕಿತ್ಸೆ ಪಡೆದುಕೊಳ್ಳಲು ಮುಂದಾಗಬೇಕು. ಈ ಬಗ್ಗೆ ಸಾರ್ವಜನಿಕರಲ್ಲಿ ತಿಳುವಳಿಕೆ ನೀಡಿ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಆರೋಗ್ಯ ಇಲಾಖೆಯ ಬಿಸ್ಮಿಲ್ಲಾ ಔಟಟೆ ಮಾತನಾಡಿ, ಆಗಾಗ ಜನತೆ ಸಾಬೂನಿನಿಂದ ಕೈ ತೊಳೆಯುವುದು, ಸ್ಯಾನಿಟೈಜರ್ ಬಳಸುವುದು, ಕಡ್ಡಾಯ ಮಾಸ್ಕ್ ಧರಿಸುವುದು ಜೊತೆಗೆ ಸಾಮಾಜಿಕ ಅಂತರ ಕಾಯ್ದುಕೊಂಡು ಕೋವಿಡ್ ಹರಡುವ ಸರಪಳಿ ಮುರಿಯಲು ಎಲ್ಲರೂ ಸಹಕಾರ ಮಾಡಬೇಕು. ಈ ಅರಿವು ಸಕಲರಲ್ಲೂ ಮೂಡಿದಾಗ ಮಾತ್ರ ಹೆಮ್ಮಾರಿ ಕೋವಿಡ್ ಸೋಂಕಿನ ಮೇಲೆ ನಿಯಂತ್ರಣ ಸಾಧಿಸಲು ಸಾದ್ಯವಾದೀತು ಎಂದು ಹೇಳಿದರು.
ಕನ್ನಾಳ ಗ್ರಾ ಪಂ. ಸದಸ್ಯೆ ಶ್ರೀಮತಿ ಅರ್ಚನಾ ಮೋಹನ ಚವ್ಹಾಣ, ಪ್ರಸ್ತುತ ಕೋವಿಡ್ ಸಂಕಷ್ಟ, ಭಯಭೀತಿ ಸೃಷ್ಠಿಸಿದೆ. ಎಲ್ಲರೂ ತಮ್ಮತಮ್ಮ ಪಾಲಿನ ಸಮಾಜಮುಖಿ ಕೆಲಸ ಕಾರ್ಯಗಳನ್ನು ಮಾಡಿ ಮಾನವೀಯತೆ ಮೆರೆಯಬೇಕು. ಪರಿಸ್ಥಿತಿಯ ಗಂಭೀರತೆ ಆವಲೋಕಿಸಿ ಸಮಾಜದ ಸಹಭಾಗಿತ್ವದಲ್ಲಿ ಹೊಣೆಗಾರಿಕೆ ನಿಭಾಯಿಸಲು ಪ್ರತಿಯೊಬ್ಬರು ಮನಸ್ಸು ತೋರಬೇಕು. ಮಹಾಮಾರಿ ಸೋಂಕಿನ ಬಗ್ಗೆ ಯಾರು ಅಸಡ್ಜೆ ಮಾಡಬಾರದು. ರೋಗ ಲಕ್ಷಣಗಳು ಕಂಡು ಬಂದ ಕೂಡಲೇ ಪರೀಕ್ಷೆ ಮಾಡಿಕೊಳ್ಳಬೇಕು. ತೊಂದರೆ ಅಗದಂತೆ ಮುಂಜಾಗೃತಾ ಕ್ರಮಗಳನ್ನು ಎಚ್ಚರಿಕೆಯಿಂದ ವಹಿಸಬೇಕು ಎಂದು ಸಲಹೆ ನೀಡಿದರು.
ಕಾರ್ಯದರ್ಶಿ ಮಾಲಾಶ್ರೀ ಅಮ್ಮನವರ ಮಾತನಾಡಿ, ಸೋಂಕು ನಿರೋಧಕ ಔಷಧಗಳು, ವೈರಸ್ ನಿರೋಧಕ ವಿಟಮಿನ್ ಟ್ಯಾಬ್ಲೆಟ್ ಸೇರಿದಂತೆ ರೋಗ ತಡೆಗಟ್ಟುವ ಎಲ್ಲ ಔಷಧೋಪಚಾರ ಮುಂಜಾಗ್ರತೆಯಿಂದ ತಗೆದುಕೊಂಡು ಸೋಂಕು ಬರದಂತೆ ಹತ್ತಿಕ್ಕಬೇಕು ಎಂದರು.
ಗುಣಕಿ ಗ್ರಾಪಂ.ಅಧ್ಯಕ್ಷೆ ಭಾಗ್ಯಶ್ರೀ ರಾಠೋಡ, ಸಿಎಚ್‍ಒ ಸಂತೋಷ ಹತ್ತಿಕಾಳ, ಗುತ್ತಿಗೆದಾರ ಮೋಹನ ಚವ್ಹಾಣ, ಗ್ರಾಪಂ.ಸದಸ್ಯರಾದ ಪ್ರಕಾಶ ಚವ್ಹಾಣ, ಕಾಶೀರಾಯಗೌಡ ಪಾಟೀಲ, ಹುಸೇನಿ ಹೊಸಮನಿ, ಸಂತೋಷ ದೊಡಮನಿ, ಅಶೋಕ ಹತ್ತಳ್ಳಿ, ತಾಯವ್ವ ಬಿರಾದಾರ, ಸವಿತಾ ಜಂಬಗಿ ಸೇರಿದಂತೆ ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಸಿಬ್ಬಂದಿಗಳು, ಗ್ರಾಮದ ಪ್ರಮುಖರು ಉಪಸ್ಥಿತರಿದ್ದರು.