ಗುಡ್ ಪ್ರೈಡೇ- ಕರಾವಳಿಯ ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆ

ಮಂಗಳೂರು,ಏ.೨-ಇಂದು ಗುಡ್ ಫ್ರೈಡೇ. ಏಸು ಕ್ರಿಸ್ತ ಶಿಲುಬೆಗೇರಿದ ದಿನ. ಪವಿತ್ರ ಗುರುವಾರದ ನಂತರ ಏಸು ಕ್ರಿಸ್ತರನ್ನು ಶಿಲುಬೆಗೇರಿಸಿದ ದಿನವಾಗಿರುವ ಶುಕ್ರವಾರವನ್ನು ಗುಡ್‌ಫ್ರೈಡೇ ಎಂದು ಆಚರಣೆ ಮಾಡಲಾಗುತ್ತದೆ. ಇದು ಕ್ರೈಸ್ತ ಸಮುದಾಯಕ್ಕೆ ಬಹಳ ಪವಿತ್ರ ದಿನವಾಗಿದ್ದು, ಕ್ರೈಸ್ತರು ತಮ್ಮದೇ ಆದ ವಿಶಿಷ್ಟ ರೀತಿಯಲ್ಲಿ ಈ ದಿನವನ್ನ ಕಳೆಯುತ್ತಾರೆ. ಗುಡ್‌ಫ್ರೈಡೇಯಂದು ಸಾಮಾನ್ಯ ಎಲ್ಲಾ ಚರ್ಚುಗಳಲ್ಲೂ ಬೆಳಗ್ಗೆಯಿಂದಲೇ ಪ್ರಾರ್ಥನೆಗಳು ನಡೆಯುತ್ತವೆ.
ಈ ದಿನದಂದು ಜಗತ್ತಿನಾದ್ಯಂತ ಕ್ರೈಸ್ತ ದೇವಾಲಯಗಳಲ್ಲಿ ಬಲಿಪೂಜೆಗಳು ಇರುವುದಿಲ್ಲ. ಶುಭ ಶುಕ್ರವಾರದಂದು ಏಸುವಿನ ಎಲ್ಲಾ ಅನುಯಾಯಿಗಳು ಚರ್ಚ್‌ನಲ್ಲಿ ಕರ್ತನಾದ ಏಸುವನ್ನು ನೆನಪಿಸಿಕೊಳ್ಳುತ್ತಾರೆ.
ಮಂಗಳೂರಿನಲ್ಲೂ ಕ್ರೈಸ್ತ ಬಾಂಧವರು ಶ್ರದ್ದೆ ಹಾಗೂ ಭಕ್ತಿಯಿಂದ ಗುಡ್ ಫ್ರೈಡೇ ಅನ್ನು ಆಚರಿಸುತ್ತಾರೆ. ಇಂದು ಬೆಳಗ್ಗಿನಿಂದಲೇ ಉಪವಾಸದ ಮೂಲಕ ವೃತ ಕೈಗೊಂಡಿರುವ ಸಾವಿರಾರು ಭಕ್ತರು ನಗರದ ಚರ್ಚ್‌ಗಳಿಗೆ ತೆರಳಿ ವಿಶೇಷವಾದ ಪ್ರಾರ್ಥನೆ ಸಲ್ಲಿಸುತ್ತಾರೆ. ಗುಡ್ ಫ್ರೈಡೇಯ ಈ ಪವಿತ್ರ ದಿನದಂದು ಕ್ರೈಸ್ತ ಬಾಂಧವರು ಕರಾವಳಿಯಲ್ಲಿರುವ ವಿವಿಧ ಚರ್ಚ್‌ಗಳಿಗೆ ತೆರಳಿ ಪೂಜೆ ಸಲ್ಲಿಸಿದರು.