ಗುಡ್ಡದ ರೇವಗ್ಗಿಯಲ್ಲಿ ರೇಣುಕಾಚಾರ್ಯರ ಬೆಳ್ಳಿ ಮೂರ್ತಿ ಪ್ರತಿಷ್ಠಾಪನ

ಕಾಳಗಿ:ನ.12: ತಾಲ್ಲೂಕಿನ ಶ್ರೀಕ್ಷೇತ್ರ ರೇವಗ್ಗಿ ರೇವಣಸಿದ್ದೇಶ್ವರ ಗುಡ್ಡದಲ್ಲಿ ಸೋಮವಾರ ಎರಡು ಬೆಳ್ಳಿ ಮೂರ್ತಿಗಳ ಪುನರ್ ಪ್ರತಿಷ್ಠಾಪನಾ ಕಾರ್ಯಕ್ರಮ ಜರುಗಿತು.

ಗರ್ಭಗುಡಿಯ ಐದು ಬೆಳ್ಳಿ ಮೂರ್ತಿಗಳಲ್ಲಿ ಎರಡು ಮೂರ್ತಿಗಳು ಭಿನ್ನವಾಗಿದ್ದವು. ಹೀಗಾಗಿ ಹರಗುರು ಚರಮೂರ್ತಿಗಳ ಹಾಗೂ ಭಕ್ತರ ಇಚ್ಛೆಯಂತೆ ಹಲವು ವರ್ಷಗಳಿಂದ ಭಕ್ತರಿಂದ ಸಂಗ್ರಹವಾಗಿದ್ದ 58 ಕೆ.ಜಿ ಬೆಳ್ಳಿಯನ್ನು ಶುದ್ಧೀಕರಿಸಿ 38 ಕೆ.ಜಿ ಬೆಳ್ಳಿಯಲ್ಲಿ ಎರಡು ಮೂರ್ತಿಗಳನ್ನು ತಯಾರಿಸಲಾಯಿತು.

ಭಾನುವಾರ ಹೊನ್ನಕಿರಣಗಿ ವೈದಿಕ ಪಾಠಶಾಲೆ ವಟುಗಳ ವೈದಿಕ ಶಾಸ್ತ್ರದೊಂದಿಗೆ ಭಾರಂಬಾವಿಯಲ್ಲಿ ಗಂಗಾಸ್ನಾನ ಜರುಗಿ ಆ ಮೂರ್ತಿಗಳನ್ನು ಬೆಳ್ಳಿಪಲ್ಲಕ್ಕಿಯಲ್ಲಿ ಮೆರವಣಿಗೆಯೊಂದಿಗೆ ಗುಡ್ಡಕ್ಕೆ ಹೊತ್ತು ತರಲಾಯಿತು. ಬಳಿಕ ಜಲವಾಸ, ಧಾನ್ಯವಾಸ, ವಸ್ತ್ರವಾಸ ಪೂಜೆ ಜರುಗಿ ರಾತ್ರಿ ಭಜನೆ ನಡೆಯಿತು.

ಸೋಮವಾರ ಹೋಮ, ಶಿವ-ಪಾರ್ವತಿ ಪೂಜೆ, ನವಗ್ರಹ ಪೂಜೆ ಮತ್ತು ರುದ್ರಾಭಿಷೇಕ ಮಾಡಿ ಮೂರ್ತಿಗಳನ್ನು ಗರ್ಭಗುಡಿಯಲ್ಲಿ ಪುನರ್ ಪ್ರತಿಷ್ಠಾಪಿಸಲಾಯಿತು

.ಹೊನ್ನಕಿರಣಗಿ ರಾಚೋಟೇಶ್ವರ ಮಠದ ಚಂದ್ರಗುಂಡ ಶಿವಾಚಾರ್ಯರು, ರಟಕಲ್ ಹಿರೇಮಠದ ರೇವಣಸಿದ್ದ ಶಿವಾಚಾರ್ಯರು, ವಿರಕ್ತಮಠದ ಸಿದ್ದರಾಮ ಸ್ವಾಮೀಜಿ, ಸುಗೂರ ರುದ್ರಮುನೀಶ್ವರ ಮಠದ ಡಾ.ಚನ್ನರುದ್ರಮುನಿ ಶಿವಾಚಾರ್ಯರು, ಚಂದನಕೇರಾ ಮಠದ ಅಭಿನವ ರಾಚೋಟೇಶ್ವರ ಶಿವಾಚಾರ್ಯರು ನೇತೃತ್ವ ವಹಿಸಿದ್ದರು.

ದೇವಸ್ಥಾನದ ಆಡಳಿತಾಧಿಕಾರಿ ಹಾಗೂ ಸೇಡಂ ಉಪ ವಿಭಾಗಾಧಿಕಾರಿ ರಮೇಶ ಕೋಲಾರ, ಚಿಂಚೋಳಿ ಶಾಸಕ ಡಾ.ಅವಿನಾಶ ಜಾಧವ ದಂಪತಿ ಸೇರಿದಂತೆ ಅನೇಕ ಭಕ್ತರು ದಂಪತಿ ಸಹಿತ ಪೂಜೆಯಲ್ಲಿ ಪಾಲ್ಗೊಂಡಿದ್ದರು.

ಶಾಶ್ವತ ರುದ್ರಾಭಿಷೇಕ ಪೂಜೆಗೆ ಆಸಕ್ತ ಭಕ್ತರು ₹11ಸಾವಿರ ನೀಡಿ ಸದಸ್ಯತ್ವ ಪಡೆಯಬೇಕು ಎಂದು ಕಾರ್ಯದರ್ಶಿ ಮಂಜುನಾಥ ನಾವಿ ಭಕ್ತರಲ್ಲಿ ಮನವಿ ಮಾಡಿದರು.

ಮುಖಂಡ ಚನ್ನಬಸಪ್ಪ ದೇವರಮನಿ, ಶಿವರಾಜ ಪಾಟೀಲ ಗೊಣಗಿ, ದತ್ತಾತ್ರೇಯ ರಾಯಗೋಳ, ಶಿವಶರಣಪ್ಪ ಚೆನ್ನೂರ, ಸಿದ್ದಯ್ಯ ಮಠಪತಿ, ಸಿದ್ದಣ್ಣಗೌಡ ಗೊಳೇದ, ರುದ್ರಶೆಟ್ಟಿ ಗುರುಮಠಕಲ್, ವಿ.ಎಮ್.ಮಠಪತಿ ಇದ್ದರು.