ಗುಡ್ಡದ ಬೇವಿನಹಳ್ಳಿ ಶಾಲೆಯಲ್ಲಿ ವಿದ್ಯಾಗಮಕ್ಕೆ ವಿದ್ಯುಕ್ತ ಚಾಲನೆ

ಹರಿಹರ.ಜ.೩;  ತಾಲ್ಲೂಕಿನ ಗುಡ್ಡದ ಬೇವಿನಹಳ್ಳಿ ಶಾಲೆಯಲ್ಲಿ ಇಲಾಖೆಯ ಆದೇಶದನ್ವಯ 6 ಮತ್ತು 7ನೇ ತರಗತಿಗಾಗಿ ವಿದ್ಯಾಗಮ ಪ್ರಾರಂಭೋತ್ಸವಕ್ಕಾಗಿ ಶಾಲಾ ಮೈದಾನ ಮತ್ತು ತರಗತಿ ಕೊಠಡಿಗಳನ್ನು ಸ್ವಚ್ಛಗೊಳಿಸಿ, ತಳಿರು-ತೋರಣಗಳಿಂದ ಸಿಂಗರಿಸಿ ಎಲ್ಲಾ ಶಿಕ್ಷಕ ವೃಂದದವರು ವಿದ್ಯಾರ್ಥಿಗಳನ್ನು ಸಡಗರ-ಸಂಭ್ರಮದಿಂದ ವಿದ್ಯಾಗಮ-2 ಕಾರ್ಯಕ್ರಮಕ್ಕಾಗಿ ಆತ್ಮೀಯವಾಗಿ ಬರಮಾಡಿಕೊಂಡರು. ಕೊರೊನಾ ಮುಂಜಾಗ್ರತೆಯೊಂದಿಗೆ ನೂತನ ವರ್ಷದ ಹೊಸ ಹುಮ್ಮಸ್ಸಿನೊಂದಿಗೆ ಸಂಭ್ರಮದಿಂದ ವಿದ್ಯಾಗಮ-2 ಕಾರ್ಯಕ್ರಮವನ್ನು ಚಾಲನೆ ಮಾಡಲಾಯಿತು. ಎಲ್ಲಾ ಮಕ್ಕಳು ಮತ್ತು ಶಿಕ್ಷಕರು ಮಾಸ್ಕ್ ಧರಿಸಿ ಬಂದಿದ್ದು, ಸ್ಯಾನಿಟೈಸರ್‌ನ  ಬಳಕೆ ಮತ್ತು ಜ್ವರ ತಪಾಸಣೆಯನ್ನು ನಡೆಸಲಾಯಿತು. ನಂತರ ಎಲ್ಲಾ ವಿದ್ಯಾರ್ಥಿಗಳಿಗೂ ಸಿಹಿ ವಿತರಿಸಿದರು.  ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕ,ಶಿಕ್ಷಕಿಯರು, ಊರಿನ ಗಣ್ಯರು, ಎಸ್.ಡಿ.ಎಂ.ಸಿ. ಸದಸ್ಯರು, ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.