ಗುಡೇಕೋಟೆ ಪೊಲೀಸರ ಕಾರ್ಯಾಚರಣೆ
ಇಬ್ಬರು ಕುರಿಕಳ್ಳರ ಬಂಧನ, 3 ಕುರಿಗಳು ವಶ.


ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಜು. 13 :- ಹೊಲದಲ್ಲಿ ಕುರಿಯನ್ನು ಕಟ್ಟಿ ಗಳೇವು ಹೊಡೆದು ಹೋಗಿ ನೋಡಲಾಗಿ ಯಾರೋ ಕಳ್ಳರು ಕುರಿ ಕಳ್ಳತನ ಮಾಡಿಕೊಂಡು ಹೋಗಿರುವ ಮತ್ತು ಕುರಿಹಟ್ಟಿಯಲ್ಲಿನ ಎರಡು ಕುರಿಗಳು ಕಳ್ಳತನ ಮಾಡಿಕೊಂಡು ಹೋಗಿರುವ ಘಟನೆ ಜು, 9 ಹಾಗೂ 10 ರಂದು ಜರುಗಿದ್ದು ಮಂಗಳವಾರ  ಎರಡು ಪ್ರಕರಣ ದಾಖಲಾಗಿರುವುದರ ಬಗ್ಗೆ ಕಾರ್ಯಾಚರಣೆ ನಡೆಸಿದ ಗುಡೇಕೋಟೆ ಪೊಲೀಸರ ತಂಡ  24 ತಾಸಿನೊಳಗೆ ಇಬ್ಬರು ಕುರಿಕಳ್ಳರನ್ನು ಬಂಧಿಸಿ ಅವರ ಬಳಿ ಇದ್ದ ಮೂರು ಕುರಿಗಳನ್ನು ಹಾಗೂ ಒಂದು ಬೈಕನ್ನು ವಶಪಡಿಸಿಕೊಂಡಿದ್ದಾರೆ.
ಸಂಡೂರು ತಾಲೂಕಿನ ಲಕ್ಕವ್ವಸೂರವ್ವನಹಳ್ಳಿ ಬದ್ರಿ (24)ಹಾಗೂ ಕೂಡ್ಲಿಗಿ ತಾಲೂಕಿನ ಕೆ ದಿಬ್ಬದಹಳ್ಳಿ ಪ್ರದೀಪ (20)ಬಂಧಿತ ಕುರಿಕಳ್ಳರಾಗಿದ್ದಾರೆ.
ಜುಲೈ 10ರಂದು ಗುಡೇಕೋಟೆಯ ಕೆ ದಿಬ್ಬದಹಳ್ಳಿ ರಸ್ತೆಯಲ್ಲಿನ ಹೊಲದಲ್ಲಿ ಬದುವಿಗೆ ಕುರಿಯನ್ನು ಕಟ್ಟಿ ತನ್ನ ಹೊಲದಲ್ಲಿ ಗಳೇವು ಹೊಡೆಯಲು ಹೋಗಿ ಕೆಲಸ ಮುಗಿಸಿಕೊಂಡು ಬಂದು ನೋಡಲಾಗಿ ಕಟ್ಟಿದ್ದ ಕುರಿಯನ್ನು ಯಾರೋಕಳ್ಳರು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಮಂಗಳವಾರ ಬೆಳಿಗ್ಗೆ ಕುರಿ ಮಾಲೀಕ ಸುರೇಶ ದೂರು ನೀಡಿದಂತೆ ಹಾಗೂ ಕುರಿಕಾಯುವ  ಸಂಕ್ಲಾಪುರದ ಯರ್ರಲಿಂಗನಹಳ್ಳಿ  ಪಾಲಯ್ಯ ತನ್ನ  ಎರಡು ಕುರಿಗಳನ್ನು ಕುರಿಹಟ್ಟಿಯಲ್ಲಿದ್ದ ಕುರಿಗಳಲ್ಲಿ ಎರಡು ಕುರಿಗಳನ್ನು  ಜು 8 ರ ಹಾಗೂ ಜು 9 ಬೆಳಗಿನ ಜಾವದ ಮಧ್ಯೆ ಕಳ್ಳತನವಾಗಿರುವ ಬಗ್ಗೆ ಮಂಗಳವಾರ ಸಂಜೆ ದೂರು ನೀಡಿದಂತೆ
ಗುಡೇಕೋಟೆ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿತ್ತು.
 ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ತಂಡ ರಚಿಸಲಾಗಿ  ಕೂಡ್ಲಿಗಿ ಡಿವೈಎಸ್ ಪಿ ಹರೀಶರೆಡ್ಡಿ ಮಾರ್ಗದರ್ಶನದಲ್ಲಿ ಕೂಡ್ಲಿಗಿ ಸಿಪಿಐ ವಸಂತ ವಿ ಅಸೋದೆ ಅವರ ನೇತೃತ್ವದ ತಂಡದಲ್ಲಿ ತನಿಖಾ ಪಿಎಸ್ಐ  ಮಾಲೀಕ್ ಸಾಹೇಬ್ ಕಲಾರಿ ಮತ್ತು ಸಿಬ್ಬಂದಿಗಳಾದ ಮಂಜುನಾಥ, ಗುರುಸ್ವಾಮಿ, ರಾಘವೇಂದ್ರ ಹಾಗೂ ಮಹಾಂತೇಶ್ ತಂಡ ಈ ಹಿಂದೆ ಕುರಿಕಳ್ಳತನದ ಪ್ರಕರಣದಲ್ಲಿ ಆರೋಪಿಯಾಗಿದ್ದ ಲಕ್ಕವ್ವಸೂರವ್ವನಹಳ್ಳಿಯ ಬದ್ರಿಯನ್ನು ವಶಕ್ಕೆ ಪಡೆದು ವಿಚಾರಿಸಲಾಗಿ ತನ್ನೊಂದಿಗೆ ಕೆ ದಿಬ್ಬದಹಳ್ಳಿಯ ಪ್ರದೀಪನು ಇದ್ದು ಇಬ್ಬರು ಸೇರಿ ಮೂರು ಕುರಿಗಳನ್ನು ಕಳ್ಳತನ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದು ಮತ್ತೋರ್ವ ಆರೋಪಿ ಪ್ರದೀಪನನ್ನು ಸಹ ಪೊಲೀಸರು  ಬಂಧಿಸಿ ಆರೋಪಿಗಳ  ಬಳಿ ಇದ್ದ ಮೂರು ಕುರಿಗಳು ಹಾಗೂ ಒಂದು ಬೈಕ್ ನ್ನು ವಶಕ್ಕೆ ಪಡೆದುಕೊಂಡಿದ್ದಾರೆ.