ಗುಡಿ ಕೈಗಾರಿಕೆಯಿಂದ ಸ್ವಾವಲಂಬನೆ ಸಾಧ್ಯ

ದೇವದುರ್ಗ,ಮಾ.೧೮- ಮಹಿಳೆಯರು ಇನ್ನೊಬ್ಬರನ್ನು ಅವಲಂಬಿಸದೆ ಗುಡಿ ಕೈಗಾರಿಕೆಗಳ ಮೂಲಕ ಆರ್ಥಿಕ ಸ್ವಾವಲಂಬನೆ ಸಾಧಿಸಿ ಸಮಾಜದಲ್ಲಿ ಮುಖ್ಯವಾಹಿನಿಗೆ ಬರಬೇಕು ಎಂದು ಎನ್‌ಆರ್‌ಎಲ್‌ಎಂ ತಾಲೂಕು ವ್ಯವಸ್ಥಾಪಕ ಮಾಕಂಡೇಯ ಹೇಳಿದರು.
ಪಟ್ಟಣದ ತಾಪಂ ಕಚೇರಿಯಲ್ಲಿ ಕರ್ನಾಟಕ ಉದ್ಯಮಶೀಲತಾ ಅಭಿವೃದ್ಧಿ ಕೇಂದ್ರ (ಸಿಡಾಕ್), ಕೌಶಲಾಭಿವೃದ್ಧಿ ಉದ್ಯಮಶೀಲತೆ, ಜೀವನೋಪಾಯ ಇಲಾಖೆ ಹಾಗೂ ಬೆಂಗಳೂರಿನ ಸಂಜೀವಿನಿ ಕೆಎಸ್‌ಆರ್‌ಎಲ್‌ಪಿಎಸ್ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ೬ದಿನಗಳ ಉದ್ಯಮಶೀಲತಾ ತಿಳಿವಳಿಕೆ ಕಾರ್ಯಕ್ರಮದಲಿ ಮಾತನಾಡಿದರು. ಮಹಿಳೆಯರು ಸ್ವಾವಲಂಬಿಗಳಾಗಿ ಜೀವನ ನಡೆಸುವುದನ್ನು ರೂಢಿಸಿಕೊಂಡು ಕುಟುಂಬಗಳ ನಿರ್ವಹಣೆಯನ್ನು ಸಮರ್ಥವಾಗಿ ನಿಭಾಯಿಸಬೇಕು ಎಂದರು.
ಹೆಣ್ಣು ಮಕ್ಕಳು ಮೂಢನಂಬಿಕೆಗಳಿಂದ ಹೊರಬಂದು ಶೈಕ್ಷಣಿಕ ಮತ್ತು ಆರ್ಥಿಕ ಪ್ರಗತಿ ಸಾಧಿಸಲು ಮುಂದಾಗಬೇಕಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಯೋಜನೆಗಳ ಪ್ರಯೋಜನ ಪಡೆದು ಸ್ವಾವಲಂಬಿ ಜೀವನ ನಡೆಸಬೇಕು. ಮಹಿಳೆಯರು ಸ್ವಯಂ ಉದ್ಯೋಗ ಕೈಗೊಳ್ಳಲು ನಾನಾ ಯೋಜನೆಗಳು, ಸಾಲಸೌಲಭ್ಯ ಲಭ್ಯಇವೆ. ಅವುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಯುಎನ್‌ಡಿಪಿ ಜಿಲ್ಲಾ ಕೋಆರ್ಡಿನೇಟರ್ ಶಶಿಕಾಂತ ಮಾತನಾಡಿ, ಸರ್ಕಾರದ ಯೋಜನೆಗಳಿಂದ ಸಿಗುವ ಅವಕಾಶಗಳನ್ನು ಮಹಿಳೆಯರು ಬಳಸಿಕೊಂಡು ಸ್ವಾವಲಂಬಿ ಬದುಕು ರೂಪಿಸಿಕೊಳ್ಳಬೇಕು. ಕಾಲಕ್ಕೆ ತಕ್ಕಂತೆ ಮಹಿಳೆಯರು ಸಮಾಜಮುಖಿಯಾಗಿ ಬದಲಾವಣೆ ಹೊಂದುವ ಮೂಲಕ ಸ್ವಂತ ಉದ್ಯೋಗ ಕೈಗೊಂಡು ಸ್ವಾಭಿಮಾನಿ ಜೀವನ ನಡೆಸಬೇಕು ಎಂದರು.
ಸರ್ಕಾರದ ಸ್ವಂತ ಉದ್ಯೋಗದ ಯೋಜನೆಗಳು, ಬ್ಯಾಂಕಿನ ವ್ಯವಹಾರ, ಮಾರುಕಟ್ಟೆ ಸಮೀಕ್ಷೆ, ಯೋಜನಾ ವರದಿ ತಯಾರಿಕೆ ಹಾಗೂ ಉದ್ಯಮ ನಿರ್ವಹಣೆ ವಿಷಯ ಕುರಿತು ತರಬೇತಿ ನೀಡಲಾಯಿತು. ವಿಷಯ ವ್ಯವಸ್ಥಾಪಕ ಮಧ್ವರಾಜ, ಕ್ಲಸ್ಟರ್ ಮೇಲ್ವಿಚಾರಕ ಪ್ರದೀಪ್ ಕುಮಾರ, ಶೋಭಾ ಪಾಟೀಲ್, ಮೇಲ್ವಿಚಾರಕಿ ಎನ್.ನಾಗರತ್ನ, ಭಾರ್ಗವಿ, ಪದ್ಮಾವತಿ ಇತರರಿದ್ದರು.