
ಸಂಜೆವಾಣಿ ವಾರ್ತೆ
ಸಿರಿಗೇರಿ ಏ.8. ಗ್ರಾಮದ ಸರ್ಕಾರಿ ಹಾಸ್ಟಲ್ ಹಿಂದಿನ ಎಸ್‍ಸಿ ಕಾಲೋನಿಯಲ್ಲಿ (ಸಿದ್ದಾರ್ಥನಗರ) ಇಂದು ಬೆಳಗಿನಜಾವ 3-30 ಗಂಟೆ ಸಮಯದಲ್ಲಿ ಗುಡಿಸಲಿಗೆ ಆಕಸ್ಮಿಕ ಬೆಂಕಿ ಬಿದ್ದು ಸಂಪೂರ್ಣ ಗುಡಿಸಲು ಸುಟ್ಟು ಭಸ್ಮವಾಗಿದೆ. ಎಚ್.ಕೃಷ್ಣಪ್ಪ ತಾಯಿ ಚಂದ್ರಮ್ಮ ಎಂಬುವವರ ಗುಡಿಸಲು ಸುಟ್ಟುಹೋಗಿದ್ದು, ಸಂತ್ರಸ್ಥರು ನೀಡಿದ ಮಾಹಿತಿಯಂತೆ ಗುಡಿಸಲಿನಲ್ಲಿದ್ದ 75ಸಾವಿರ ರೂ. ನಗದುಹಣ, ಜೀವನ ಅಗತ್ಯ ವಸ್ತುಗಳು, ಜೋಳ, ಅಕ್ಕಿ, ಬಟ್ಟೆಬರೆಗಳು ಸುಟ್ಟು, ಬಂಗಾರದ ಆಭರಣಗಳು ನಾಶವಾಗಿ ಕಳೆದುಹೋಗಿವೆ. ಅವಘಡ ಸಂಭವಿಸಿದ ಮಾಹಿತಿಯನ್ನು ಪಡೆದು ಸ್ಥಳಕ್ಕೆ ಬಂದಿದ್ದ ಕುರುಗೋಡು ವಿಭಾಗ ಅಗ್ನಿಶಾಮಕದಳದ ಸಿಬ್ಬಂದಿ ಬಂದು ಬೆಂಕಿ ನಂದಿಸುವ ಕಾರ್ಯ ಮಾಡಿದರೂ ಶೇಕಡ 90ರಷ್ಟು ಗುಡಿಸಲು, ವಸ್ತುಗಳು ಸುಟ್ಟು ನಷ್ಟ ಸಂಭವಿಸಿದೆ. ವಿಷಯ ತಿಳಿದ ಶಾಸಕ ಎಂ.ಎಸ್.ಸೋಮಲಿಂಗಪ್ಪನವರ ಪುತ್ರ ಸಿದ್ದಪ್ಪ ಸಂತ್ರಸ್ತ್ರಿಗೆ ಸಾಂತ್ವನ ಹೇಳಿ ಹಣ ಸಹಾಯ ಮಾಡಿದ್ದಾರೆ, ನಂತರ ಸ್ಥಳೀಯ ಕಾಂಗ್ರೇಸ್ ಮುಖಂಡರು, ಗ್ರಾ.ಪಂ.ಸದಸ್ಯರು ಭೇಟಿನೀಡಿ ಹಣ ಸಹಾಯ ಮಾಡಿದ್ದಾರೆ. ಸಿರುಗುಪ್ಪ ವಿಧಾನಸಭಾ ಕ್ಷೇತ್ರ ಬಿಎಸ್‍ಪಿ ಪಕ್ಷದ ಅಭ್ಯರ್ಥಿ ಸಿರಿಗೇರಿ ಹಳ್ಳಿಮರದ ವೀರೇಶ್ ಭೀಟಿನೀಡಿ ತಾತ್ಕಾಲಿಕ ವಾಸದ ಶೆಡ್ ವ್ಯವಸ್ಥೆಗೆ ಸಹಾಯ ಮಾಡುತ್ತೇನೆಂದು ಭರವಸೆ ನೀಡಿದ್ದಾರೆಂದು ಮಾಹಿತಿ ತಿಳಿದುಬಂದಿದೆ. ಇದೇವೇಳೆ ಮತಗಟ್ಟೆಗಳ ಪರಿಶೀಲನೆಗೆಂದು ಬಂದಿದ್ದ ಸಿರುಗುಪ್ಪ ತಹಶೀಲ್ದಾರ್ ಮಂಜುನಾಥಸ್ವಾಮಿ, ಇಓ ಎಂ.ಬಸಪ್ಪ, ಪಿಡಿಓ ಶಿವಕುಮಾರ್ ಮತ್ತು ಸಿಬ್ಬಂದಿಯವರು ಗುಡಿಸಲು ಸುಟ್ಟ ಜಾಗಕ್ಕೆ ಭೇಟಿನೀಡಿ ಮಾಹಿತಿ ಪಡೆದರು.