
ವಿಜಯಪುರ,ಮಾ.26- ಗುಡಿಸಲಿಗೆ ಆಕಸ್ಮಿಕ ಬೆಂಕಿ ಬಿದ್ದು ಐದು ಲಕ್ಷ ರೂ.ಮೌಲ್ಯದ ನಗದು ಹಣ, ಐವತ್ತು ಗ್ರಾಂ ಚಿನ್ನ ಸೇರಿದಂತೆ ದಿನಬಳಕೆ ಸಾಮಗ್ರಿಗಳು ಸುಟ್ಟಿರುವ ಘಟನೆ ಗುರುವಾರ ತಾಲೂಕಿನ ನಾಗಬೇನಾಳ ತಾಂಡಾ ಸಮೀಪದ ನಾರಾಯಣಪೂರ ಚೆಕ್ಪೋಸ್ಟ್ ಹತ್ತಿರ ನಡೆದಿದೆ.
ಚೆಕ್ ಪೋಸ್ಟ್ ಹತ್ತಿರ ರಿಸನಂ 89ರಲ್ಲಿ ಬರುವ ಯಮನಪ್ಪ ರಾಮಪ್ಪ ಲಮಾಣಿ ಇವರ ಜಮೀನಿನಲ್ಲಿ ಅವರ ಸಂಬಂಧಿಕ ಖೇಮಪ್ಪ ಪಾಂಡಪ್ಪ ಲಮಾಣಿ ಗುಡಿಸಲು ಮನೆ ಹಾಕಿಕೊಂಡು ಜೀವನ ನಡೆಸುತ್ತಿದ್ದರು.ಗುಡಿಸಲಿನಲ್ಲಿ ಸಣ್ಣಪುಟ್ಟ ಮಕ್ಕಳಿದ್ದು ಬೆಂಕಿ ಬೀಳುತ್ತಲೇ ತಕ್ಷಣ ಹೊರಗೆ ಓಡಿ ಬಂದಿದ್ದಾರೆ.ಬೆಂಕಿಯ ತೀವ್ರತೆಗೆ ಟ್ರಂಕ್ನಲ್ಲಿ ಸಾಲಗಾರರಿಗೆಂದು ತಂದಿಟ್ಟುಕೊಂಡಿದ್ದ ಐದು ಲಕ್ಷ ರೂ.ನಗದು ಹಣ,ಸುಟ್ಟು ಹೋಗಿದೆ.50 ಗ್ರಾಂ ಚಿನ್ನಾಭರಣ,100 ಗ್ರಾಂ ಬೆಳ್ಳಿ ಸುಟ್ಟಿದೆ.ಎಲ್ಐಸಿ ಬಾಂಡ್ಗಳು,ಎಲ್ಲಾ ರೀತಿಯ ದಾಖಲಾತಿಗಳು,ಶಾಲಾ ದಾಖಲಾತಿಗಳು,ಆಹಾರ ಪದಾರ್ಥಗಳು ಬೆಂಕಿಯ ಕೆನ್ನಾಲಿಗೆಗೆ ಭಸ್ಮವಾಗಿದೆ.
ಗುಡಿಸಲಿನ ಪಕ್ಕದಲ್ಲಿದ್ದ ಕುರಿಯ ಶೆಡ್ಡಿಗೂ ಬೆಂಕಿ ಬಿದ್ದು ಸುಟ್ಟಿದೆ.ಘಟನೆಯ ವಿಷಯ ತಿಳಿಯುತ್ತಿದ್ದಂತೆ ನಾಗಬೇನಾಳ ಗ್ರಾಮ ಲೆಕ್ಕಾಧಿಕಾರಿ ಹರ್ಷಿತ್ ಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪೊಲೀಸ್ ಸಿಬ್ಬಂದಿ ಪಿ.ಎಸ್.ಪಾಟೀಲ,ರವಿ ವಿಜಯಪುರ ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ.
@12bc =ಮಾನವೀಯತೆ ಮೆರೆದ ಗ್ರಾಮ ಲೆಕ್ಕಾಧಿಕಾರಿ:
ಬೆಂಕಿ ಅವಘಡದ ಘಟನೆಯನ್ನು ನೋಡುತ್ತಲೇ ಗ್ರಾಮಲೆಕ್ಕಾಧಿಕಾರಿ ಹರ್ಷಿತಗೌಡ ವಯಕ್ತಿಕವಾಗಿ ಐದು ಸಾವಿರ ರೂ.ಗಳನ್ನು ಸಂತ್ರಸ್ಥ ಖೇಮಪ್ಪ ಲಮಾಣಿ ಕುಟುಂಬಕ್ಕೆ ನೀಡಿ ಮಾನವೀಯತೆ ಮೆರೆದರು.
ಬಿಕ್ಕಿ ಬಿಕ್ಕಿ ಅತ್ತ ಮಹಿಳೆ : ಗುಡಿಸಲಿಗೆ ತನ್ನೆದುರಿಗೆ ಬೆಂಕಿ ಬಿದ್ದು ಸುಟ್ಟು ಹೋಗುತ್ತಿದ್ದರೂ ಅದನ್ನು ನಂದಿಸಲಾಗದೇ ಮಹಿಳೆ ಕುಸಿದು ಬಿದ್ದ ಘಟನೆಯೂ ನಡೆಯಿತು.ಲಕ್ಷಾಂತರ ರೂ.ನಗದು ,ಮಕ್ಕಳ ಚಿನ್ನಾಭರಣ, ಮಹತ್ವದ ಕಾಗದ ಪತ್ರಗಳು ಸುಡುತ್ತಿರುವುದನ್ನು ಕಂಡು ಬಿಕ್ಕಿ ಬಿಕ್ಕಿ ಅತ್ತ ಘಟನೆ ಎಂತವರ ಹೃದಯವನ್ನೂ ಕಲಕುವಂತಿತ್ತು. ಅಗ್ನಿಶಾಮಕ ವಾಹನ ಬರುವಷ್ಟರಲ್ಲಿಯೇ ಈ ಎಲ್ಲ ಘಟನೆ ನಡೆದು ಹೋಗಿದ್ದು ದುರಂತ. ಅದೃಷ್ಟವಶಾತ್ ಮಕ್ಕಳು ಬೆಂಕಿಗೆ ಆಹುತಿಯಾಗುವುದರಿಂದ ಬಚಾವಾಗಿದ್ದಾರೆ. ಆದರೆ ಖೇಮಪ್ಪ ಲಮಾಣಿ ಕುಟುಂಬ ಇದೀಗ ಅಕ್ಷರಶಃ ಬೀದಿಗೆ ಬಿದ್ದಿದೆ.