ಗುಟ್ಕಾ, ಸಿಗರೇಟ್ ಸೇವನೆ -ಕಟ್ಟುನಿಟ್ಟಿನ ಕ್ರಮಕ್ಕೆ ಜಿಲ್ಲಾಧಿಕಾರಿ ಸೂಚನೆ

ಹಾವೇರಿ: ನ.21- ಕಾಲೇಜುಗಳ ಕ್ಯಾಂಟಿನ್‍ಗಳಲ್ಲಿ ಗುಟ್ಕಾ ಹಾಗೂ ಸಿಗರೇಟ್ ಸೇವನೆ ತಕ್ಷಣದಿಂದಲೇ ನಿಷೇಧಿಸಲು ಸುತ್ತೋಲೆ ಹೊರಡಿಸಬೇಕು. ಕ್ಯಾಂಟಿನ್, ಹೋಟೆಲ್, ಅಂಗಡಿ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು, ಬೀಡಿ, ಸಿಗರೇಟ್ ಸೆದದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ನಿರ್ದಾಕ್ಷಿಣ್ಯವಾಗಿ ದಂಡವಿಧಿಸುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜರುಗಿದ ರಾಷ್ಟ್ರೀಯ ತಂಬಾಕು ನಿಯಂತ್ರಣ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಎನ್‍ಫೋರ್ಸ್‍ಮೆಂಟ್ ಅಧಿಕಾರಿಗಳು ತಂಬಾಕು ನಿಯಂತ್ರಣಕ್ಕೆ ಕ್ರಮ ವಹಿಸದೇ, ದಂಡ ಹಾಕದೇ ಸುಮ್ಮನಿರುವ ಅಧಿಕಾರಿಗಳಿಗೆ ಕಾರಣ ಕೇಳಿ ನೋಟೀಸ್ ಜಾರಿಮಾಡಬೇಕು. ವಾರದೊಳಗೆ ತಹಶೀಲ್ದಾರಗಳ ನೇತೃತ್ವದಲ್ಲಿ ತಾಲೂಕು ಮಟ್ಟದ ಸಮನ್ವಯ ಸಮಿತಿ ಸಭೆ ನಡೆಸಿ ತಂಬಾಕು ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳ ಕುರಿತಂತೆ ವರದಿ ಸಲ್ಲಿಸುವಂತೆ ಸೂಚನೆ ನೀಡಿದರು.
ಪ್ಯಾಕೇಟ್ ಹೊರತುಪಡಿಸಿ ಒಂದು-ಎರಡರಂತೆ ಬಿಡಿಯಾಗಿ ಸಿಗರೇಟ್ ಮಾರಾಟಕ್ಕೆ ಅವಕಾಶವಿರುವುದಿಲ್ಲ. ತಂಬಾಕು ಹಾಗೂ ಸಿಗರೇಟ್ ಕಂಪನಿಗಳ ಜಾಹೀರಾತುಗಳಲ್ಲಿ ಕೋಟ್ಪಾ ಕಾಯ್ದೆಯಂತೆ ಕ್ರಮವಹಿಸಬೇಕು. ಗುಟ್ಕಾ ಮತ್ತು ಸಿಗರೇಟ್ ಉತ್ಪನ್ನಗಳ ಮೇಲೆ ನಿಗಧಿತ ಪ್ರಮಾಣದಲ್ಲಿ ಚಿತ್ರಹಾಕಬೇಕು. ಬಸ್ ನಿಲ್ದಾಣದಲ್ಲಿ ಸಿಗರೇಟ್, ಗುಟ್ಕಾ ಸೇವನೆಯನ್ನು ನಿಷೇಧಿಸಬೇಕು, ಹೋಟೆಲ್ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟ್ ಸೇವನೆಗೆ ಮಾರ್ಗಸೂಚಿಯಂತೆ ಸ್ಥಳವಕಾಶಗಳನ್ನು ಕಲ್ಪಿಸಬೇಕು. ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣಗಳ ಕಾಂಪ್ಲೆಕ್ಸ್‍ಗಳಲ್ಲಿ ತಂಬಾಕು ಮಾರಾಟ ಮಾಡದಂತೆ ಸುತ್ತೋಲೆ ಹೊರಡಿಸಿದರೂ ಸವಣೂರು, ಹಾನಗಲ್ ಹಾಗೂ ಹಿರೇಕೆರೂರು ಬಸ್ ನಿಲ್ದಾಣಗಳಲ್ಲಿ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂಬ ಅಧಿಕಾರಿಗಳ ಮಾಹಿತಿಯ ಹಿನ್ನೆಲೆಯಲ್ಲಿ ಈ ಕುರಿತಂತೆ ತಕ್ಷಣವೇ ಪರಿಶೀಲಿಸಿ ಮಾರಾಟಮಾಡದಂತೆ ಕ್ರಮವಹಿಸಲು ರಸ್ತೆ ಸಾರಿಗೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ತಂಬಾಕು ಮುಕ್ತ ಕಚೇರಿ, ಶಾಲಾ – ಕಾಲೇಜು ಆವರಣ ಎಂದು ಘೋಷಿಸುವ ಫಲಕಗಳನ್ನು ಕಡ್ಡಾಯವಾಗಿ ಶಿಕ್ಷಣ ಸಂಸ್ಥೆಗಳ ಮುಖ್ಯ ದ್ವಾರದಲ್ಲಿ ಪ್ರದರ್ಶನ ಮಾಡಬೇಕು. ತಂಬಾಕು ದುಷ್ಪರಿಣಾಮಗಳ ಕುರಿತ ಹಾಗೂ ಕೋಟ್ಪಾ 2003ರ ಕುರಿತು ಶಾಲಾ ಮಕ್ಕಳಿಗೆ ಅರಿವು ಮೂಡಿಸುವುದು, ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ವ್ಯಾಪಕವಾಗಿ ಹಮ್ಮಿಕೊಂಡು ಜಾಗೃತಿ ಮೂಡಿಸಬೇಕು ಎಂದು ಸೂಚನೆ ನೀಡಿದರು.
ಕೋಟ್ಪಾ 2003ರ ಕಾಯ್ದೆ ಕಲಂ 4ರಂತೆ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧವಿದೆ. ಕಲಂ 5ರ ಪ್ರಕಾರ ತಂಬಾಕು ಜಾಹೀರಾತುಗಳ ನಿಷೇಧವಿದೆ. ಕಲಂ 6ಎ ಪ್ರಕಾರ ಅಪ್ರಾಪ್ತರಿಗೆ ತಂಬಾಕು ಉತ್ಪನ್ನಗಳ ಮಾರಾಟ ನಿಷೇಧವಿದೆ. ಕಲಂ 6ಬಿ ಪ್ರಕಾರ ಶಾಲಾ-ಕಾಲೇಜುಗಳ ಆವರಣದ 100 ಗಜಗಳ ಅಂತದಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ನಿಷೇಧವಿದೆ. ಈ ಕುರಿತಂತೆ ಎಲ್ಲ ಅನುಷ್ಠಾನಾಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ಕ್ರಮವಹಿಸಬೇಕು ಎಂದು ಸೂಚನೆ ನೀಡಿದರು.
ಇದೇ ಸಂದರ್ಭದಲ್ಲಿ ಕೋಟ್ಪಾ ಕಾಯ್ದೆಯಡಿ ವಸೂಲಿಯಾದ ದಂಡದ ಹಣದಲ್ಲಿ ಶಾಲಾ-ಕಾಲೇಜುಗಳಲ್ಲಿ ಜಾಗೃತಿ ಮೂಡಿಸಲು ಪ್ರೊಜೆಕ್ಟರ್ ಖರೀದಿ ಹಾಗೂ ಜಿಲ್ಲಾ ತಂಬಾಕು ವ್ಯಸನಮುಕ್ತ ಕೇಂದ್ರಕ್ಕೆ ಸ್ಪೈರೋಮೀಟರ್ ಖರೀದಿಗೆ ಸಮ್ಮತಿ ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಂದ್ರ ದೊಡ್ಮನಿ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಪಿ.ಆರ್.ಹಾವನೂರ, ಡಾ.ನಿಲೇಶ್, ಡಾ.ಪ್ರಭಾಕರ, ಡಾ.ಜಯಾನಂದ, ಡಾ.ದೇವರಾಜ, ಡಾ.ಜಗದೀಶ್ ಒಳಗೊಂಡಂತೆ ವಿವಿಧ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.