ಗುಟ್ಕಾ-ಪಾನ್ ಪರಾಕ್ ಮಾರಾಟ ಅಂಗಡಿಗಳ ಮೇಲೆ ಪೊಲೀಸರ ದಾಳಿ

ಕುಣಿಗಲ್, ಜು. ೨೯- ಪಟ್ಟಣದಾದ್ಯಂತ ಸಾರ್ವಜನಿಕ ಸ್ಥಳಗಳಲ್ಲಿ ಗುಟ್ಕಾ, ಪಾನ್ ಪರಾಕ್ ಮಾರಾಟ ಮಾಡುವ ಅಂಗಡಿಗಳು,ರೈಲು ನಿಲ್ದಾಣ ಹಾಗೂ ಬಸ್ ನಿಲ್ದಾಣದ ಅಂಗಡಿಗಳ ಮೇಲೆ ಪೊಲೀಸರು ದಾಳಿ ನಡೆಸಿ ಪರಿಶೀಲಿಸಿದರು.
ಪಟ್ಟಣದಾದ್ಯಂತ ಪ್ರಮುಖ ಸ್ಥಳಗಳಲ್ಲಿ ಡಿವೈಎಸ್‌ಪಿ ರಮೇಶ್ ನೇತೃತ್ವದ ಪೋಲಿಸ್ ಅಧಿಕಾರಿಗಳ ತಂಡವು ಅಂಗಡಿಗಳಲ್ಲಿ ಅಕ್ರಮ ಗುಟ್ಕಾ, ಪಾನ್ ಮಸಾಲ, ಮದ್ಯ ಮಾರಾಟ ಮಾಡುತ್ತಾರೆ ಎಂಬ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿತು.
ರೈಲು ನಿಲ್ದಾಣ, ಬಸ್ ನಿಲ್ದಾಣ, ಡಾಬಾಗಳು, ಅಂಗಡಿಗಳು, ಗುಜರಿ, ವರ್ಕ್‌ಶಾಪ್‌ಗಳು, ಚಿಕ್ಕಕೆರೆ ಕೋಡಿ, ದೊಡ್ಡಕೆರೆ ಸೋಮೇಶ್ವರ ಆವರಣ ಸೇರಿದಂತೆ ಎಲ್ಲ ಕಡೆ ತಪಾಸಣೆ ನಡೆಸಿ ಅಂಗಡಿ ಮಾಲೀಕರಿಗೆ ಹಾಗೂ ಡಾಬಾ ಮಾಲೀಕರಿಗೆ ಅಕ್ರಮ ಮದ್ಯ, ಗುಟ್ಕಾ, ಪಾನ್‌ಪರಾಗ್ ಮಾರಾಟ ಮಾಡದಂತೆ ಎಚ್ಚರಿಕೆ ನೀಡಲಾಯಿತು.
ದ್ವಿಚಕ್ರ ವಾಹನ ಸೇರಿದಂತೆ ೬ ಸಾವಿರ ರೂ. ದಂಡ ವಸೂಲಿ ಮಾಡಿ, ರೌಡಿ ಶೀಲಟರ್ ಪ್ರತಾಪ್ ಎಂಬ ವ್ಯಕ್ತಿಯನ್ನು ವಶಕ್ಕೆ ಪಡೆದು, ತಹಶೀಲ್ದಾರ್ ನ್ಯಾಯಾಲಯಕ್ಕೆ ಒಪ್ಪಿಸಿದರು. ದಾಳಿಯಲ್ಲಿ ಡಿವೈಎಸ್‌ಪಿ ರಮೇಶ್, ಇನ್ಸ್‌ಪೆಕ್ಟರ್ ಗುರುಪ್ರಸಾದ್, ಅಮೃತೂರು ಸರ್ಕಲ್ ಇನ್ಸ್‌ಪೆಕ್ಟರ್ ಅರುಣ್ ಸೋಲಂಕಿ, ತುರುವೇಕೆರೆ ಪಿಎಸ್‌ಐ ಕೇಶವಮೂರ್ತಿ, ಅಮೃತೂರು ಪಿಎಸ್‌ಐ ಮಂಗಳಗೌರಮ್ಮ, ಹುಲಿಯೂರುದುರ್ಗ ಪಿಎಸ್‌ಐ ಚೇತನ್‌ಕುಮಾರ್ ಪಾಲ್ಗೊಂಡಿದ್ದರು.