ಗುಜರಿ ವಸ್ತುಗಳಿಂದ ಬೈಕ್ ತಯಾರಿಸಿದ ಯುವಕ

ನವದೆಹಲಿ,ಮೇ.೨-ಗುಜರಿ ವಸ್ತುಗಳನ್ನು ಸಂಗ್ರಹಿಸಿ ಪೆಟ್ರೋಲ್ ಮತ್ತು ಡೀಸೆಲ್ ಅಗತ್ಯವಿಲ್ಲದೆ ಓಡುವ ಏಳು ಆಸನವುಳ್ಳ ಬೈಕ್‌ನ್ನು ಯುವಕನೊಬ್ಬ ತಯಾರಿಸಿ ಯಶಸ್ವಿಯಾಗಿ ಓಡಿಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ವಿಡಿಯೋದಲ್ಲಿ, ಸೌರ ಫಲಕವನ್ನು ಅಳವಡಿಸಿದ ಏಳು ಆಸನಗಳ ವಾಹನದಲ್ಲಿ ಏಳು ಯುವಕರು ಪ್ರಯಾಣಿಸುತ್ತಿರುವುದನ್ನು ಕಾಣಬಹುದು. ಸೌರ ಫಲಕವು ಸೂರ್ಯನಿಂದ ಶಕ್ತಿಯನ್ನು ಹೀರಿಕೊಳ್ಳುವುದಲ್ಲದೆ ಪ್ರಯಾಣಿಕರಿಗೆ ನೆರಳನ್ನು ಸಹ ಒದಗಿಸುತ್ತದೆ. ಈ ಹೊಸ ಆವಿಷ್ಕಾರವು ಸಾಮಾಜಿಕ ಜಾಲತಾಣದಲ್ಲಿ ಅನೇಕರನ್ನು ಆಕರ್ಷಿಸಿದೆ. ಇಷ್ಟೇ ಅಲ್ಲದೆ ಇದು ಕೆಲವು ಕಾರ್ಪೊರೇಟ್ ದೈತ್ಯರ ಮೆಚ್ಚುಗೆಯನ್ನೂ ಪಡೆದಿದೆ.
ಖ್ಯಾತ ಕೈಗಾರಿಕೋದ್ಯಮಿ ಹರ್ಷ್ ಗೋಯೆಂಕಾ ಈ ವಿಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಈ ರೀತಿಯ ಉತ್ಪನ್ನವು ತುಂಬಾ ಬಾಳಿಕೆ ಬರುತ್ತದೆ, ಗುಜರಿಯಿಂದ ಮಾಡಲ್ಪಟ್ಟ ಏಳು ಆಸನಗಳ ವಾಹನ ತಯಾರಿಸಿದ ಯುವಕನನ್ನು ಅವರು ಶ್ಲಾಘಿಸಿದ್ದಾರೆ. ಇದು ಸೂರ್ಯನ ಬೆಳಕಿನಿಂದ ಶಕ್ತಿಯನ್ನು ತೆಗೆದುಕೊಳ್ಳುವುದಲ್ಲದೆ, ನೆರಳನ್ನು ಸಹ ಒದಗಿಸುತ್ತದೆ. “ಈ ರೀತಿಯ ತಂತ್ರಜ್ಞಾನವನ್ನು ನೋಡುವುದು ಹೆಮ್ಮೆಯ ವಿಷಯ” ಎಂದು ಕ್ಯಾಪ್ಷನ್ ಬರೆದುಕೊಂಡಿದ್ದಾರೆ.