ಗುಜರಾತ್ ಸಮರ: ಕೈ ನಿಂದ ಅಂತಿಮ ಪಟ್ಟಿ ಬಿಡುಗಡೆ

ಅಹಮದಾಬಾದ್,ನ.೧೭- ಗುಜರಾತ್ ವಿಧಾನಸಭೆ ಚುನಾವಣೆ ಕಣದಿಂದ ದಿನದಿಂದ ದಿನಕ್ಕೆ ರಂಗೇರುತ್ತಿದ್ದು ಈ ಬಾರಿ ಶತಾಯಗತಾಯ ಅಧಿಕಾರ ಹಿಡಿಯಬೇಕು ಎನ್ನುವ ಜಿದ್ದಿಗೆ ಬಿದ್ದಿರುವ ಕಾಂಗ್ರೆಸ್ ಪಕ್ಷ ತನ್ನ ೩೭ ಅಭ್ಯರ್ಥಿಗಳ ಅಂತಿಮ ಪಟ್ಟಿ ಪ್ರಕಟಿಸಿದೆ.ಇದರೊಂದಿಗೆ ೧೮೨ ವಿಧಾನಸಭೆಯ ಸಂಖ್ಯಾಬಲದಲ್ಲಿ ಒಟ್ಟು ೧೭೯ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಡಿಸೆಂಬರ್ ೧ ಮತ್ತು ೫ ರಂದು ಎರಡು ಹಂತದಲ್ಲಿ ಚುನಾವಣೆ ನಡೆಯಲಿದ್ದು ಡಿಸೆಂಬರ್ ೮ ರಂದು ಮತ ಎಣಿಕೆ ನಡೆಯಲಿದೆ.
ಕಾಂಗ್ರೆಸ್ ಬಿಡುಗಡೆ ಮಾಡಿರುವ ಅಂತಿಮ ೩೭ ಅಭ್ಯರ್ಥಿಗಳ ಏಳನೇ ಪಟ್ಟಿಯಲ್ಲಿ ಬಯಾದ್‌ನಿಂದ ಮಹೇಂದ್ರಸಿನ್ಹ್ ವಘೇಲಾ, ಸಾನಂದ್‌ನಿಂದ ರಮೇಶ್ ಕೋಲಿ, ಖಂಭತ್‌ನಿಂದ ಚಿರಾಗ್ ಪಟೇಲ್, ದಾಹೋದ್ ನಿಂದ ಹರ್ಷದ್ಭಾಯ್ ನಿನಾಮ ಮತ್ತು ಪಾಲನ್‌ಪುರದಿಂದ ಮಹೇಶ್ ಪಟೇಲ್ ಸೇರಿದ್ದಾರೆ.ಇದು ಅಭ್ಯರ್ಥಿಗಳ ಕೊನೆಯ ಮತ್ತು ಅಂತಿಮ ಪಟ್ಟಿ ಎಂದು ಪಕ್ಷದ ಮೂಲಗಳು ತಿಳಿಸಿವೆ. ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷ ಎನ್ ಸಿಪಿ ಜೊಯೆ ಮೈತ್ರಿ ಮಾಡಿಕೊಂಡಿದ್ದು ಶರದ್ ಪವಾರ್ ನೇತೃತ್ವದ ಪಕ್ಷಕ್ಕೆ ಮೂರು ಸ್ಥಾನಗಳಲ್ಲಿ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟಿದೆ.ಮಹೇಂದ್ರಸಿಂಗ್ ವಘೇಲಾ ಕಳೆದ ತಿಂಗಳು ಕಾಂಗ್ರೆಸ್ ಸೇರಿದ್ದರು. ೫೮ ವರ್ಷದ ಮಾಜಿ ಶಾಸಕರು ೨೦೧೨ ಮತ್ತು ೨೦೧೭ ರ ನಡುವೆ ಉತ್ತರ ಗುಜರಾತ್‌ನ ಬಯಾದ್‌ನ ಕಾಂಗ್ರೆಸ್ ಶಾಸಕರಾಗಿದ್ದರು. ಅವರು ವಿಧಾನಸಭೆ ಚುನಾವಣೆಗೆ ಕೆಲವು ತಿಂಗಳುಗಳ ಮೊದಲು ಆಗಸ್ಟ್ ೨೦೧೭ ರಲ್ಲಿ ಪಕ್ಷ ತೊರೆದ ನಂತರ ಬಿಜೆಪಿಗೆ ಸೇರಿದ್ದರು.ಪಕ್ಷ ಗೋದ್ರಾದಿಂದ ರಶ್ಮಿತಾಬೆನ್ ಚೌಹಾಣ್, ವಡೋದರಾ ನಗರದಿಂದ (ಎಸ್‌ಸಿ) ಗುನ್ವಂತರಾಯ್ ಪರ್ಮಾರ್ ಮತ್ತು ಗಾಂಧಿನಗರ ಉತ್ತರದಿಂದ ವೀರೇಂದ್ರಸಿನ್ಹ್ ವಘೇಲಾ ಅವರನ್ನು ಕಣಕ್ಕಿಳಿಸಿದೆ.ನವೆಂಬರ್ ೪ ರಂದು ಕಾಂಗ್ರೆಸ್ ತನ್ನ ಮೊದಲ ಪಟ್ಟಿಂ ಬಿಡುಗಡೆ ಮಾಡಿದ್ದು, ಚುನಾವಣೆಗೆ ೪೩ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದೆ. ನವೆಂಬರ್ ೧೦ ರಂದು, ಪಕ್ಷ ೪೬ ಹೆಸರುಗಳ ಮತ್ತೊಂದು ಪಟ್ಟಿ ಹೊರತಂದಿತು. ಶುಕ್ರವಾರ ಏಳು ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿತ್ತು ಆದರೆ ಒಬ್ಬರು ಮೊದಲು ಘೋಷಿಸಿದ ಅಭ್ಯರ್ಥಿಗೆ ಬದಲಿಯಾಗಿದ್ದರು. ಒಂಬತ್ತು ಅಭ್ಯರ್ಥಿಗಳ ನಾಲ್ಕನೇ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.