ಗುಜರಾತ್ ನಲ್ಲಿ ಆಯುರ್ವೇದ ಸಂಶೋಧನಾ ಸಂಸ್ಥೆ

ನವದೆಹಲಿ ಸೆಪ್ಟಂಬರ್ 16. ರಾಷ್ಟ್ರೀಯ ಮಹತ್ವದ ಆಯುರ್ವೇದ ಚಿಕಿತ್ಸಾಪದ್ಧತಿ ಕುರಿತ ಸಂಶೋಧನಾ ಸಂಸ್ಥೆಯೊಂದನ್ನು ಗುಜರಾತ್ ಆಯುರ್ವೇದ ವಿಶ್ವವಿದ್ಯಾಲಯದ ಆವರಣದಲ್ಲಿ ಸ್ಥಾಪಿಸಲಾಗುವುದು ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾಕ್ಟರ್ ಹರ್ಷವರ್ಧನ್ ಅವರು ರಾಜ್ಯಸಭೆಯಲ್ಲಿಂದು ತಿಳಿಸಿದರು.

2020ರ ಆಯುರ್ವೇದ ಬೋಧನೆ ಹಾಗೂ ಸಂಶೋಧನಾ ಸಂಸ್ಥೆ ಕುರಿತ ಮಸೂದೆಯನ್ನು ರಾಜ್ಯಸಭೆಯಲ್ಲಿಂದು ಮಂಡಿಸಿ ಅಂಗೀಕಾರ ಪಡೆದ ಸಂದರ್ಭದಲ್ಲಿ ಅವರು ಈ ವಿಷಯ ತಿಳಿಸಿದರು.

ಆಯುರ್ವೇದ ಚಿಕಿತ್ಸಾ ಪದ್ಧತಿ ಕುರಿತು ಬೋಧನೆ ಮತ್ತು ಸಂಶೋಧನೆ ಮಾಡುವ ಸಂಸ್ಥೆಯನ್ನು ಸ್ಥಾಪಿಸುವ ಉದ್ದೇಶದಿಂದ ಈ ಮಸೂದೆಯನ್ನು ತರಲಾಗಿದೆ. ಇಂತಹ ರಾಷ್ಟ್ರೀಯ ಮಟ್ಟದ ಮಹತ್ವವಿರುವ ಉದ್ದೇಶಿತ ಸಂಸ್ಥೆಯನ್ನು ಗುಜರಾತ್ ಆಯುರ್ವೇದ ವಿಶ್ವವಿದ್ಯಾಲಯದ ಆವರಣದಲ್ಲಿ ಸ್ಥಾಪಿಸಲಾಗುವುದು ಎಂದು ಅವರು ಹೇಳಿದರು.

ಗುಜರಾತ್ನ ಜಾಮ್ ನಗರದಲ್ಲಿರುವ ಮೂರು ಆಯುರ್ವೇದ ಸಂಸ್ಥೆಗಳನ್ನು ವಿಲೀನಗೊಳಿಸಲು ಈ ಮಸೂದೆ ಸಹಕಾರಿಯಾಗ ಲಿದೆ. ಎಂದು ಅವರು ತಿಳಿಸಿದರು.

ಆಯುರ್ವೇದ ದಂತಹ ಪುರಾತನ ವೈದ್ಯಕೀಯ ಪದ್ಧತಿಯನ್ನು ಪ್ರೋತ್ಸಾಹಿಸಲು ಸರ್ಕಾರ ಬದ್ಧವಾಗಿದೆ. ಆಯುರ್ವೇದ ಕುರಿತ ಎಲ್ಲ ರಾಷ್ಟ್ರೀಯ ಮಹತ್ವದ ಸಂಸ್ಥೆಗಳಿಗೆ ಡೀಮ್ಡ್ ವಿಶ್ವವಿದ್ಯಾಲಯದ ಸ್ಥಾನಮಾನ ನೀಡಲು ಸಚಿವಾಲಯ ಮುಂದಾಗಿದೆ ಎಂದರು.