ಗುಜರಾತ್ ಕರಾವಳಿಗೆ ಸಂಜೆ ಅಪ್ಪಳಿಸಲಿರುವ ಬಿಪರ್ ಜಾಯ್

೭೪ ಸಾವಿರ ಜನ ಸ್ಥಳಾಂತರ
ನವದೆಹಲಿ,ಜೂ.೧೫- ಬಿಪರ್‌ಜಾಯ್ ಚಂಡಮಾರುತಿಂದ ಅರಬ್ಬಿ ಸಮುದ್ರ ಸಮುದ್ರ ಪ್ರಕ್ಷುಬ್ಧವಾಗಿದ್ದು ಗುಜರಾತ್‌ನ ಕಚ್ ಸೇರಿದಂತೆ ೧೨ ಜಿಲ್ಲೆಗಳ ಕರಾವಳಿ ತೀರ ಪ್ರದೇಶಕ್ಕೆ ಇಂದು ಸಂಜೆ ಚಂಡಮಾರುತ ಅಪ್ಪಳಿಸುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ೭೪ ಸಾವಿರಕ್ಕೂ ಅಧಿಕ ಜನರನ್ನು ಗುಜರಾತ್ ಸರ್ಕಾರ ಸ್ಥಳಾಂತರ ಮಾಡಿದೆ.
ಮುನ್ನೆಚ್ಚರಿಕೆ ಕ್ರಮವಾಗಿ ೭೬ ರೈಲು ಸಂಚಾರ ರದ್ದು ಮಾಡಲಾಗಿದ್ದು ಪ್ರಮುಖ ದೇವಾಲಯಗಳ ಬಾಗಿಲು ಬಂದ್ ಮಾಡಲಾಗಿದೆ. ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಕಟ್ಟು ನಿಟ್ಟಿನ ಸೂಚನೆ ನೀಡಲಾಗಿದೆ. ಚಂಡಮಾರುತದಿಂದ ಭೂಕುಸಿತ ಉಂಟಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಆರೆಂಜ್ ಮತ್ತು ಹಳದಿ ಅಲರ್ಟ್ ಘೋಷಿಸಲಾಗಿದ್ದು ಕರಾವಳಿ ತೀರ ಪ್ರದೇಶದಲ್ಲಿ ವ್ಯಾಪಕ ಸಿದ್ಧತೆ ಮತ್ತು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ.ಬಿಪರ್‌ಜಾಯ್ ಚಂಡಮಾರುತ ಗುಜರಾತ್ ಕರಾವಳಿಯಿಂದ ಸುಮಾರು ೨೦೦ ಕಿ.ಮೀ ದೂರದಲ್ಲಿದೆ. ಸಂಜೆ ವೇಳೆಗೆ ಸೌರಾಷ್ಟ್ರ ಮತ್ತು ಕಚ್ ಮತ್ತು ಪಕ್ಕದ ಪಾಕಿಸ್ತಾನದ ಕರಾವಳಿಯನ್ನು ಮಾಂಡ್ವಿ ಮತ್ತು ಕರಾಚಿ ನಡುವೆ ಜಖೌ ಬಂದರಿನ ಬಳಿ ದಾಟುತ್ತದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಬಿಪರ್‌ಜಾಯ್ ಚಂಡಮಾರುತ ಗರಿಷ್ಠ ಗಾಳಿಯ ವೇಗ ಗಂಟೆಗೆ ೧೧೫-೧೨೫ ಕಿಮೀ ವೇಗದಲ್ಲಿ ಬೀಸುವ ಸಾಧ್ಯತೆಗಳಿವೆ.ಅದರಲ್ಲಿಯೂ ಇಂದು ಮಧ್ಯಾಹ್ನದ ಬಳಿಕ ಗಾಳಿಯ ವೇಗ ಹೆಚ್ಚಾಗುವ ಸಾಧ್ಯತೆ ಇದೆ ಎಂದು ತಿಳಿಸಿದೆ.ಬಿಪರ್ ಜಾಯ್ ಚಂಡಮಾರುತ ಗುಜರಾತ್ ಕರಾವಳಿಸಮೀಪಿಸುತ್ತಿದ್ದಂತೆ ಮಳೆಯ ತೀವ್ರತೆ ಹೆಚ್ಚಾಗಲಿದೆ ಎಂದು ಹೇಳಲಾಗಿದ್ದು ಅದರಲ್ಲಿಯೂ ಪೋರಬಂದರ್, ರಾಜ್‌ಕೋಟ್, ಮೊರ್ಬಿ, ಜುನಾಗಢ್ ಮತ್ತು ಸೌರಾಷ್ಟ್ರ ಮತ್ತು ಉತ್ತರ ಗುಜರಾತ್ ಪ್ರದೇಶದ ಉಳಿದ ಜಿಲ್ಲೆಗಳಲ್ಲಿ ಕೆಲವು ಪ್ರದೇಶಗಳು ಭಾರೀ ಮತ್ತು ಅತ್ಯಂತ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ೧೮ ತಂಡಗಳು, ರಾಜ್ಯ ವಿಪತ್ತು ನಿರ್ವಹಣಾ ಪಡೆಂi ೧೨ ತಂಡಗಳು, ರಾಜ್ಯ ರಸ್ತೆ ಮತ್ತು ಕಟ್ಟಡ ಇಲಾಖೆಯ ೧೧೫ ತಂಡಗಳು ಮತ್ತು ರಾಜ್ಯ ವಿದ್ಯುತ್ ಇಲಾಖೆಯ ೩೯೭ ತಂಡಗಳನ್ನು ಮುನ್ನೆಚ್ಚರಿಕೆ ಕ್ರಮವಾಗಿ ಕರಾವಳಿಯ ವಿವಿಧ ಜಿಲ್ಲೆಗಳಲ್ಲಿ ನಿಯೋಜಿಸಲಾಗಿದೆ.
ಮೀನುಗಾರಿಗೆ ನಿಷೇಧ.ಚಂಡಮಾರುತ ತೀವ್ರತೆ ಪಡೆದುಕೊಳ್ಳಲಿರುವ ಹಿನ್ನೆಲೆಯಲ್ಲಿ ನಾಳೆಯವರೆಗೆ ಮೀನುಗಾರಿಕೆ ಚಟುವಟಿಕೆಗಳನ್ನು ಸ್ಥಗಿತಗೊಳಿಸಲಾಗಿದೆ, ಬಂದರುಗಳನ್ನು ಮುಚ್ಚಲಾಗಿದೆ ಮತ್ತು ಹಡಗುಗಳು ಲಂಗರು ಹಾಕಲಾಗಿದೆ.
ಚಂಡಮಾರುತದಿಂದಾಗಿ ಈ ಪ್ರದೇಶದಲ್ಲಿ ಅತ್ಯಂತ ಭಾರೀ ಮಳೆ ಮತ್ತು ಬಲವಾದ ಗಾಳಿಯೊಂದಿಗೆ ಹವಾಮಾನ ಪ್ರತಿಕೂಲ ಪರಿಣಾಮ ಬೀರಲಿದೆ ಎಂದು ತಿಳಿಸಲಾಗಿದೆ.
೭೬ ರೈಲುಗಳು ರದ್ದು
ಗುಜರಾತ್ ಕರಾವಳಿಗೆ ಸಂಜೆ ಬಿಪರ್ ಚಂಡಮಾರುತ ಅಪ್ಪಳಿಸಲಿರುವ ಹಿನ್ನೆಲೆಯಲ್ಲಿ ಪ್ರಯಾಣಿಕರ ಸುರಕ್ಷತೆ ಮತ್ತು ರೈಲು ಕಾರ್ಯಾಚರಣೆಯನ್ನು ಖಚಿತಪಡಿಸಿಕೊಳ್ಳಲು ಮುನ್ನೆಚ್ಚರಿಕೆ ಕ್ರಮವಾಗಿ ೭೬ ರೈಲುಗಳನ್ನು ರದ್ದುಗೊಳಿಸಲಾಗಿದೆ ಎಂದು ಪಶ್ಚಿಮ ರೈಲ್ವೆ ತಿಳಿಸಿದೆ.
ಗುಜರಾತಿನ ಎರಡು ಪ್ರಸಿದ್ಧ ದೇವಾಲಯಗಳಾದ ದೇವಭೂಮಿ ದ್ವಾರಕಾದಲ್ಲಿರುವ ದ್ವಾರಕಾಧೀಶ್ ದೇವಾಲಯ ಮತ್ತು ಗಿರ್ ಸೋಮನಾಥ ಜಿಲ್ಲೆಯ ಸೋಮನಾಥ ದೇವಾಲಯ ಭಕ್ತರಿಗಾಗಿ ಮುಚ್ಚಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಸನ್ನದ್ದತೆ ಪರೀಶೀಲನೆ
ಬಿಪರ್‍ಜೋಯ್ ಚಂಡಮಾರುತದ ಭೂಕುಸಿತಕ್ಕೆ ಸಶಸ್ತ್ರ ಪಡೆಗಳ ಸನ್ನದ್ಧತೆಯನ್ನು ಕೇಂದ್ರ ಸಚಿವರಾದ ರಾಜನಾಥ ಸಿಂಗ್, ಮ್ ಸುಖ್ ಮಾಂಡವೀಯ ಹಾಗು ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಪರಿಶೀಲಿಸಿ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ಧಾರೆ.
ಮೂರು ಸೇನಾ ಪಡೆಗಳು ಜನರ ರಕ್ಷಣೆಗೆ ನಿಯೋಜಿಸಲಾಗಿದೆ ಎಂದು ರಾಜನಾಥ್ ಸಿಂಗ್ ತಿಳಿಸಿದ್ದಾರೆ