ಗುಜರಾತ್ ಅಲ್ಪಸಂಖ್ಯಾತ ವಿರೋಧಿ ಕೋಮು ಹತ್ಯಾಕಾಂಡ ತೀರ್ಪು: ಎಸ್‍ಯುಸಿಐ ಆಕ್ರೋಶ

ಕಲಬುರಗಿ.ಸೆ.2: ಇತ್ಯರ್ಥವಾಗದೇ ಉಳಿದಿರುವ ಗುಜರಾತ್ ಅಲ್ಪಸಂಖ್ಯಾತ ವಿರೋಧಿ ಕೋಮು ಹತ್ಯಾಕಾಂಡ ಪ್ರಕರಣಗಳನ್ನು ಮುಚ್ಚುವ ಸುಪ್ರಿಂಕೋರ್ಟ್ ತೀರ್ಪಿಗೆ ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ಪಕ್ಷದ ಜಿಲ್ಲಾ ಕಾರ್ಯದರ್ಶಿ ಎಚ್.ವಿ. ದಿವಾಕರ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭಾರತದ ಸರ್ವೋಚ್ಛ ನ್ಯಾಯಾಲಯವು ಕಳೆದ ಆಗಸ್ಟ್ 30ರಂದು ನೀಡಿದ ತೀರ್ಪಿನಲ್ಲಿ 2002ರ ಗುಜರಾತ್ ಕೋಮು ಹತ್ಯೆಗಳ ಸಂತ್ರಸ್ತರು ಸಲ್ಲಿಸಿದ ಅರ್ಜಿಗಳನ್ನು ಹಾಗೂ ಬಹಳ ಕಾಲ ಬಾಕಿ ಉಳಿದಿದ್ದ ಮಾನವ ಹಕ್ಕು ಆಯೋಗವು ಸಲ್ಲಿಸಿದ್ದ ಅರ್ಜಿಗಳನ್ನು ಯೋಗ್ಯ ರೀತಿಯಲ್ಲಿ ಮುಂದುವರೆಸುವ ಬದಲು, ಅವುಗಳನ್ನು ಅನುಪಯುಕ್ತ ಎಂದು ಕರೆದು ಅತ್ಯಂತ ಏಕಪಕ್ಷೀಯ ರೀತಿಯಲ್ಲಿ ಅಂತ್ಯಗೋಲಿಸುವ ತೀರ್ಪು ಕೊಡಲಾಗಿದೆ ಎಂದು ಅವರು ಹೇಳಿಕೆಯಲ್ಲಿ ಆಘಾತ ವ್ಯಕ್ತಪಡಿಸಿದ್ದಾರೆ.
ನಮ್ಮ ಅಭಿಪ್ರಾಯದಲ್ಲಿ ಇದು ನೊಂದವರಿಗೆ ನ್ಯಾಯ ಒದಗಿಸಲು ವಿಫಲವಾಗಿರುವುದು ಮಾತ್ರವಲ್ಲ, ಬದಲಿಗೆ ಗುಜರಾತ್ ಹತ್ಯಾಕಾಂಡದ ಅಪರಾಧಿಗಳಿಗೆ ಪುರಸ್ಕಾರ ನೀಡಿರುವ ಅತ್ಯಂತ ಗಂಭೀರ ರೀತಿಯ ತಪ್ಪಾಗಿದೆ. ಈ ಘೋರ ಅನ್ಯಾಯದ ಆದೇಶವನ್ನು ತಕ್ಷಣವೇ ರದ್ದುಗೊಳಿಸಬೇಕು ಮತ್ತು ಅರ್ಜಿಗಳನ್ನು ಪರಿಗಣಿಸಿ ಆ ಮೂಲಕ ನೊಂದವರಿಗೆ ಸಾಧ್ಯವಾದಷ್ಟು ಬೇಗ ನ್ಯಾಯವನ್ನು ಒದಗಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಇಂತಹ ಅನ್ಯಾಯದ ವಿರುದ್ಧ ಪ್ರಬಲ ಹೋರಾಟ ಬೆಳೆಸಿ ಪ್ರತಿಭಟನೆಯ ಧ್ವನಿಯನ್ನು ಎತ್ತಬೇಕು ಎಂದು ಅವರು ಜನರಿಗೆ ಮನವಿ ಮಾಡಿದ್ದಾರೆ.