
ನವದೆಹಲಿ,ಏ.೪- ಭಟ್ಕಳ ಮೂಲದ ಉಗ್ರ ಯಾಸಿನ್ ಭಟ್ಕಳ್, ಗುಜರಾತ್‌ನ ಸೂರತ್‌ನಲ್ಲಿ ಅಣುಬಾಂಬ್ ಹಾಕಲು ಸಂಚು ರೂಪಿಸಿ ದೇಶದ ವಿರುದ್ಧ ಯುದ್ಧ ಸಾರುವ ದೊಡ್ಡ ಹುನ್ನಾರ ನಡೆಸಿದ್ದ ಸ್ಫೋಟಕ ವಿಷಯ ಬೆಳಕಿಗೆ ಬಂದಿದೆ. ಈ ಸಂಬಂಧ ದಿಲ್ಲಿಯ ಪಟಿಯಾಲಾ ಹೌಸ್ ಎನ್‌ಐಎ ವಿಶೇಷ ನ್ಯಾಯಾಲಯವು, ಭಟ್ಕಳ್ ಹಾಗೂ ಇತರ ೧೦ ಮಂದಿ ವಿರುದ್ಧ ದೋಷಾರೋಪ ದಾಖಲು ಮಾಡಿದೆ. ಭಟ್ಕಳ್ ಸದಸ್ಯನಾಗಿದ್ದ ‘ಇಂಡಿಯನ್ ಮುಜಾಹಿದೀನ್ ಸಂಘಟನೆಯು, ಮುಸ್ಲಿಂ ಯುವಕರನ್ನು ತನ್ನತ್ತ ಸೆಳೆದುಕೊಂಡು ಉಗ್ರರನ್ನು ನೇಮಿಸುವ ಕುರಿತಂತೆ ಎನ್‌ಐಎ ತನಿಖೆ ನಡೆಸಿತ್ತು. ಈ ಸಂಬಂಧ ದೋಷಾರೋಪ ದಾಖಲಿಸಿದ ವಿಶೇಷ ನ್ಯಾಯಾಧೀಶ ಶೈಲೇಂದ್ರ ಮಲಿಕ್, ‘ಆರೋಪಿಗಳು ಬಳಸಿದ ಡಿಜಿಟಲ್ ಸಾಧನ (ಮೊಬೈಲ್, ಕಂಪ್ಯೂಟರ್ ಇತ್ಯಾದಿ..) ವಿಶ್ಲೇಷಿಸಿದಾಗ ಅದರಲ್ಲಿ ಅನೇಕ ಜಿಹಾದಿ ಅಂಶಗಳು ಲಭಿಸಿವೆ.
ಜತೆಗೆ ಮುಸ್ಲಿಮೇತರರನ್ನು ಹತ್ಯೆ ಮಾಡಿದ್ದನ್ನು ಸಮರ್ಥಿಸಲಾಗಿದೆ. ಭಟ್ಕಳ್ ಕೇವಲ ಉಗ್ರ ಚಟುವಟಿಕೆ ಮಾತ್ರವಲ್ಲ, ಬಾಂಬ್ ತಯಾರಿಕೆಯಲ್ಲೂ ಪರಿಣತನಾಗಿದ್ದ ಎಂದು ತಿಳಿದುಬರುತ್ತದೆ’ ಎಂದಿದ್ದಾರೆ.
ಯಾಸಿನ್ ಭಟ್ಕಳ್ ಹಾಗೂ ಇನ್ನೊಬ್ಬ ಉಗ್ರ ಮೊಹಮ್ಮದ್ ಸಾಜಿದ್ ನಡುವೆ ನಡೆದ ಚಾಟಿಂಗ್ ವೇಳೆ, ಸೂರತ್‌ನಲ್ಲಿ ಅಣುಬಾಂಬ್ ಇಡುವ ಮುನ್ನ ಮುಸ್ಲಿಮರನ್ನು ತೆರವು ಮಾಡಬೇಕು’ ಎಂಬ ಸಂಭಾಷಣೆ ಗಮನಿಸಬಹುದಾಗಿದೆ ಎಂದು ಕೋರ್ಟ್ ಹೇಳಿದೆ.
೨೦೧೩ರ ಜೂ.೧ರ ಇನ್ನೊಂದು ಚಾಟಿಂಗ್‌ನಲ್ಲಿ ಸಾಮಾನ್ಯ ಜನರ ಬದಲು ದೊಡ್ಡ ರಾಜಕಾರಣಿಗಳನ್ನು ಕೊಲ್ಲಬೇಕು ಎಂದು ಮಾತುಕತೆ ನಡೆಸಲಾಗಿದೆ. ಛತ್ತೀಸ್‌ಗಢದ ಕಾಂಗ್ರೆಸ್ ನಾಯಕನ ಮೇಲಿನ ಮಾವೋವಾದಿ ದಾಳಿಯನ್ನೂ ಉಲ್ಲೇಖಿಸಲಾಗಿದೆ. ಆದರೆ, ಭಟ್ಕಳ್ ಪರ ವಕೀಲ ಇದನ್ನು ಮೇಲಿನ ಕೋರ್ಟಿನಲ್ಲಿ ಪ್ರಶ್ನಿಸುವುದಾಗಿ ಹೇಳಿದ್ದಾರೆ. ಹಳೆಯ ಕೇಸಿನಲ್ಲಿ ಚಾಟ್‌ಗಳನ್ನೇ ಈ ಪ್ರಕರಣದಲ್ಲೂ ಪ್ರಸ್ತಾಪಿಸಲಾಗುತ್ತಿದೆ. ಇದು ನಿಯಮಬಾಹಿರ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಭಟ್ಕಳ್ ೨೦೧೩ರಲ್ಲೇ ಬಂಧಿತನಾಗಿದ್ದು, ವಿವಿಧ ಪ್ರಕರಣಗಳಲ್ಲಿ ಶಿಕ್ಷೆಗೆ ಗುರಿಯಾಗಿ ಸದ್ಯ ದಿಲ್ಲಿಯ ತಿಹಾರ್ ಜೈಲಿನಲ್ಲಿದ್ದಾನೆ.