ಗುಂಪುಗಾರಿಕೆಗೆ ಅವಕಾಶವಿಲ್ಲ: ಸಿಟಿ ರವಿ

ಬೆಂಗಳೂರು, ನ. ೨೦- ಬಿಜೆಪಿಯಲ್ಲಿ ಗುಂಪುಗಾರಿಕೆಗೆ ಅವಕಾಶವಿಲ್ಲ, ಪಕ್ಷಕ್ಕೆ ಮುಜುಗರ ತರುವ ರೀತಿಯಲ್ಲಿ ಯಾರೇ ವರ್ತಿಸಿದರೂ ಅದನ್ನು ಸಹಿಸುವುದಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದರು.
ಗುಂಪುಗಾರಿಕೆ ಮಾಡುವುದನ್ನೇ ಕೆಲವರು ಅರ್ಹತೆ ಎಂದುಕೊಂಡಿದ್ದಾರೆ. ಇದು ಸರಿಯಲ್ಲ, ಇದನ್ನು ಸಹಿಸಲ್ಲ ಎಂದು ಅವರು ಪರೋಕ್ಷವಾಗಿ ಸಂಪುಟ ವಿಸ್ತರಣೆ ಒತ್ತಡ ಹೇರುತ್ತಿರುವ ಶಾಸಕರಿಗೆ ಎಚ್ಚರಿಕೆ ನೀಡಿದರು.
ಕೆಲ ಶಾಸಕರು, ಸಚಿವರುಗಳ ವಿರುದ್ಧ ಬಹಿರಂಗವಾಗಿ ಮಾತನಾಡುವುದು ಸಲ್ಲದು. ಹಾಗೆಯೇ ಸಭೆಗಳನ್ನು ನಡೆಸುವುದು ಸರಿಯಲ್ಲ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಸಂಪುಟ ವಿಸ್ತರಣೆ ಸಂಬಂಧ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಈಗಾಗಲೇ ಉತ್ತರ ನೀಡಿದ್ದಾರೆ. ಸಂಪುಟ ವಿಸ್ತರಣೆ ಬಗ್ಗೆ ವರಿಷ್ಠರು ಹಾಗೂ ಮುಖ್ಯಮಂತ್ರಿಗಳು ತೀರ್ಮಾನ ಮಾಡುತ್ತಾರೆ ಎಂದರು.
ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು, ಸಂಘಟನಾತ್ಮಕ ದೃಷ್ಟಿಯಿಂದ ಎಲ್ಲಾ ರಾಜ್ಯಗಳಿಗೂ ಭೇಟಿನೀಡುತ್ತಿದ್ದಾರೆ. ರಾಜ್ಯಕ್ಕೂ ಸದ್ಯದಲ್ಲೇ ಭೇಟಿನೀಡುವರು. ಇನ್ನೂ ದಿನಾಂಕ ನಿಗದಿಯಾಗಿಲ್ಲ. ಹಾಗೆಯೇ ಗೃಹ ಸಚಿವ ಅಮಿತ್ ಷಾ ಭೇಟಿ ಬಗ್ಗೆಯೂ ತೀರ್ಮಾನ ಆಗಿಲ್ಲ ಎಂದರು.
ಗೋಹತ್ಯೆ, ಲವ್ ಜಿಹಾದ್ ಕಾಯಿದೆ
ಮುಂದಿನ ಅಧಿವೇಶನದಲ್ಲಿ ಗೋಹತ್ಯೆ ನಿಷೇಧ ಮತ್ತು ಲವ್ ಜಿಹಾದ್ ಕಾಯಿದೆ ತರುತ್ತೇವೆ. ಈ ಎರಡೂ ಕಾಯ್ದೆ ಮಂಗಳೂರಿನಲ್ಲಿ ನಡೆದ ಬಿಜೆಪಿಯ ಕೋರ್ ಕಮಿಟಿ ಸಭೆಯಲ್ಲಿ ತೀರ್ಮಾನ ಆಗಿತ್ತು. ಅದರಂತೆ, ಎರಡೂ ಕಾಯ್ದೆಗಳನ್ನು ಮುಂಬರುವ ವಿಧಾನಮಂಡಲದ ಅಧಿವೇಶನದಲ್ಲಿ ಮಂಡಿಸಲಾಗುವುದು ಎಂದರು.
ಮದುವೆಗಾಗಿ ಮತಾಂತರ ಸಲ್ಲದು ಎಂದು ಅಲಹಾಬಾದ್ ಹೈಕೋರ್ಟ್ ಹೇಳಿದೆ. ಹಲವೆಡೆ ಮೋಸದ ಮದುವೆ ನಡೆದಿದೆ. ಇದನ್ನು ತಡೆಯಲು ಕಾನೂನು ಜಾರಿಮಾಡುತ್ತೇವೆ ಎಂದರು.
ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು, ನಾಳೆ ತಮಿಳುನಾಡಿಗೆ ಬರುತ್ತಿದ್ದಾರೆ. ಸೂಪರ್ ಸ್ಟಾರ್ ರಜನಿಕಾಂತ್ ಭೇಟಿ ನಿಶ್ಚಿತ ಆಗಿಲ್ಲ ಎಂದರು.