ಗುಂತಕಲ್-ವಿಜಯಪುರ್, ರಾಯಚೂರು-ಗುಂತಕಲ್ ಪ್ಯಾಸೆಂಜರ್ ಪ್ರಾರಂಭಕ್ಕೆ ಒತ್ತಾಯ

ರಾಯಚೂರು,ನ.೧೨- ರಾಯಚೂರು ವಿಜಯಪುರ ಮತ್ತು ರಾಯಚೂರ್-ಗುಂತಕಲ್ ಪ್ಯಾಸೆಂಜರ್ ಟ್ರೈನನ್ನು ಪ್ರಾರಂಭಿಸಲು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಶಿವರಾಮೇಗೌಡ ಬಣದ ವತಿಯಿಂದ ಜಿಲ್ಲಾ ರೈಲ್ವೆ ವ್ಯವಸ್ಥಾಪಕರ ಮೂಲಕ ಗುಂತಕಲ್ ರೈಲ್ವೆ ಪ್ರಬಂಧಕರಿಗೆ ಮನವಿ ಸಲ್ಲಿಸಲಾಯಿತು.
ಕಳೆದ ಆರು ತಿಂಗಳಿನಿಂದ ಕೋವಿಡ್ ಮಹಾಮಾರಿ ಸಾಂಕ್ರಾಮಿಕ ರೋಗ ನಿವಾರಣೆಗಾಗಿ ಎಲ್ಲಾ ರೈಲುಗಳನ್ನು ಸ್ಥಗಿತಗೊಳಿಸಲಾಗಿತ್ತು. ಆದರೆ ಕೊರೋನಾ ಭೀತಿ ಕಡಿಮೆಯಾದ ಹಿನ್ನೆಲೆಯಲ್ಲಿ ಕಳೆದ ಎರಡು ಮೂರು ತಿಂಗಳಿಂದ ಪುನಃ ಕೆಲವು ರೈಲು ಒಡಾಟ ಪ್ರಾರಂಭಿಸಿದ್ದು, ಗುಂತಕಲ್-ಹಿಂದುಪುರ್ ಪ್ಯಾಸೆಂಜರ್ ಕಾರ್ಯ ಪ್ರಾರಂಭಿಸಿದೆ. ಬಡವರಿಗೆ, ಕೂಲಿ ಕಾರ್ಮಿಕರಿಗೆ, ರೈತರಿಗೆ ಅನುಕೂಲವಾಗಲಿದ್ದು, ಸರ್ಕಾರದ ಆದೇಶದಂತೆ ಕೋವಿಡ್ ನ ಎಲ್ಲಾ ಅಗತ್ಯ ಮಾರ್ಗಸೂಚಿಗಳನ್ನು ಪಾಲಿಸಿ ಗುಂತಕಲ್-ವಿಜಾಪುರ ಮತ್ತು ರಾಯಚೂರು-ಗುಂತಕಲ್ ಪ್ಯಾಸೆಂಜರ್ ಪ್ರಾರಂಭಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಸಿ.ಕೆ.ಜೈನ್, ಮಲ್ಲಿಕಾರ್ಜುನ, ಕಿಶನ್ ರಾವ್, ಅಸಿಫ್, ಸಂಜಯ್ ವೈಷ್ಣವ್, ಸುಂಕಪ್ಪ, ಸುದರ್ಶನ್ ಗೌಡ, ನಾಗರಾಜ್, ನಾಗೇಶ್, ಕೃಷ್ಣ ಯಾದವ್, ಖಾಜಾ, ಭೀಮೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.