ಗುಂಡ್ಲುಪೇಟೆಯಲ್ಲಿ ಜ್ಞಾನ ಸೂರ್ಯ ಆಧ್ಯಾತ್ಮಿಕ ಭವನ ಲೋಕರ್ಪಣೆ

ಚಾಮರಾಜನಗರ, ನ.1- ಸ್ನೇಹ,ವಿಶ್ವಾಸ, ಸತ್ಯ, ನಂಬಿಕೆ, ಪ್ರಾಮಾಣಿಕತೆಗಳಂತಹ ಸರ್ವಕಾಲಿಕ ಮೌಲ್ಯಗಳನ್ನು ಆಧ್ಯಾತ್ಮಿಕ ಸಾಧನದ ಮೂಲಕ ಸಾಧಿಸಬಹುದಾಗಿದೆ ಎಂದು ಮೈಸೂರು ಉಪವಲಯ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯಾ ವಿಶ್ವವಿದ್ಯಾಲಯದ ಮುಖ್ಯ ಸಂಚಾಲಕರಾದ ರಾಜಯೋಗಿನಿ ಬಿ.ಕೆ.ಲಕ್ಷ್ಮೀಜಿ ತಿಳಿಸಿದರು.
ಅವರು ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರಿಯಾ ವಿಶ್ವವಿದ್ಯಾಲಯ ಆಧ್ಯಾತ್ಮಿಕ ಸೇವಾ ಕೇಂದ್ರದ ವತಿಯಿಂದ ಗುಂಡ್ಲುಪೇಟೆ ಪಟ್ಟಣದ ಶ್ವೇತಾದ್ರಿ ಲೇಔಟ್‍ನಲ್ಲಿ ನಿರ್ಮಾಣ ಮಾಡಲಾಗಿರುವ ಜ್ಞಾನ ಸೂರ್ಯ ಆಧ್ಯಾತ್ಮಿಕ ಭವನವನ್ನು ಉದ್ಘಾಟಿಸಿ, ಮಾತನಾಡಿದ ಅವರು, ಆಧ್ಯಾತ್ಮಿಕ ಮಾರ್ಗವು ಮನುಷ್ಯನನ್ನು ಜೀವನದ ಪರಮ ಗುರಿಯತ್ತ ಕೊಂಡೊಯ್ಯಲು ಇರುವಂತಹ ಉತ್ತಮ ದಾರಿಯಾಗಿದೆ ಎಂದರು. ಭೂಮಿಯಲ್ಲಿ ನಾವು ಜನಿಸಿರುವುದು ಮನುಷ್ಯರಾಗಲು ಎನ್ನುವ ದಾರ್ಶನಿಕರ ವಾಣಿಯಂತೆ ಸಾರ್ಥಕ ಜೀವನಕ್ಕೆ ಉತ್ತಮ ಸೇವಾ ಕಾರ್ಯಗಳು ಅಡಿಪಾಯವಾಗಿದೆ ಎಂದು ತಿಳಿಸಿದರು.
ಗುಂಡ್ಲುಪೇಟೆ ಪಟ್ಟಣದಲ್ಲಿ ಕಳೆದ 25 ವರ್ಷಗಳಿಂದ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರಿಯಾ ವಿಶ್ವವಿದ್ಯಾಲಯವು ಸಾರ್ವಜನಿಕವಾಗಿ ಸಹಜ ಆಧ್ಯಾತ್ಮಿಕ ಜ್ಞಾನ ಹಾಗೂ ರಾಜಯೋಗ ಶಿಕ್ಷಣ, ಜೀವನ ಮೌಲ್ಯ, ಮಾನಸಿಕ ಆರೋಗ್ಯ ಸೇರಿದಂತೆ ಹಲವು ವಿಚಾರಗಳನ್ನು ಸಾಮಾನ್ಯ ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ ನಿರಂತರ ಸೇವೆಯನ್ನು ಬಾಡಿಗೆ ಕಟ್ಟಡದಲ್ಲಿ ನಿರ್ವಹಿಸುತ್ತಿತ್ತು. ನಮ್ಮ ಈ ಸೇವೆಯನ್ನು ಪರಿಗಣಿಸಿದ ಗುಂಡ್ಲುಪೇಟೆ ಪುರಸಭೆ ಮಾಜಿ ಅಧ್ಯಕ್ಷರಾದ ಪುಟ್ಟರಂಗನಾಯಕರು ಉದಾರ ಮನಸ್ಸಿನಿಂದ ದಾನವಾಗಿ ನಿವೇಶನ ನೀಡಿದರು. ಈ ನಿವೇಶನದಲ್ಲಿ ಸ್ಥಳೀಯ ಹಾಗೂ ಜಿಲ್ಲೆಯ ರಾಜಯೋಗ ವಿದ್ಯಾರ್ಥಿಗಳ ಸಹಕಾರದಿಂದ ಇಂದು ಸುಸಜ್ಜಿತವಾದ ಜ್ಞಾನ ಸೂರ್ಯಭವನ ಉದ್ಘಾಟನೆಗೊಂಡಿದೆ ಎಂದು ತಿಳಿಸಿದರು. ಈ ಭವನದಲ್ಲಿ 200 ಜನರು ಒಟ್ಟಿಗೆ ಕುಳಿತು ರಾಜಯೋಗ ಶಿಕ್ಷಣದ ತರಬೇತಿ ಪಡೆಯಲು ಸಹಕಾರಿಯಾಗಿದ್ದು ಧ್ಯಾನ ಅಭ್ಯಾಸ ಮಾಡಲು ಧ್ವನಿ ಮತ್ತು ಬೆಳಕಿನ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು. ಪ್ರತಿ ದಿನ ಬೆಳಿಗ್ಗೆ 6 ರಿಂದ 12 ರವರೆಗೆ ಹಾಗೂ ಸಂಜೆ 4 ರಿಂದ 8 ರವರೆಗೆ ಉಚಿತವಾಗಿ ರಾಜಯೋಗ ಶಿಕ್ಷಣ ನೀಡಲು ತೆರೆದಿರುತ್ತದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಕಬ್ಬಿಣ ಕೋಲೇಶ್ವರ ಮಠಾಧ್ಯಕ್ಷರಾದ ಶ್ರೀ ಇಮ್ಮಡಿ ಗುರುಮಲ್ಲಸ್ವಾಮಿಗಳು ಆಶೀರ್ವಚನ ನೀಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಗುಂಡ್ಲುಪೇಟೆ ತಹಶೀಲ್ದಾರ್ ನಂಜುಂಡಯ್ಯ ಭಾಗವಹಿಸಿದ್ದರು. ಈ ಸಂರ್ಭದಲ್ಲಿ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರಿಯಾ ವಿಶ್ವವಿದ್ಯಾಲಯ ಆಧ್ಯಾತ್ಮಿಕ ಸೇವಾ ಕೇಂದ್ರದ ಮುಖ್ಯ ಸಂಚಾಲಕಿ ರಾಜಯೋಗಿನಿ ಬಿ.ಕೆ.ವೀಣಾಜಿ, ಮಂಡ್ಯ ಜಿಲ್ಲೆ ಸಂಚಾಲಕಿ ಶಾರದಾಜಿ, ಕೊಳ್ಳೇಗಾಲದ ಪ್ರಭಾಮಣಿ.ಜಿ, ಚಾಮರಾಜನಗರದ ದಾನೇಶ್ವರೀಜಿ, ವೀಣಾಜಿ, ಬಿ.ಕೆ.ಸರೋಜಾಜಿ, ಶೋಭಾಜಿ, ಲಲಿತಾ ಮಣೀಜಿ, ರತ್ನಾಜೀ, ರಮಾಜೀ, ರಾಧಾಜೀ, ಬಿ.ಕೆ.ಆರಾಧ್ಯ ಅವರು ಉಪಸ್ಥಿತರಿದ್ದರು.