
ಮುಂಬೈ,ಮೇ.೧- ಮೂವರು ನಕ್ಸಲೀಯರು ಭದ್ರತಾ ಪಡೆಯ ಗುಂಡೇಟಿಗೆ ಬಲಿಯಾಗಿದ್ದಾರೆ. ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯಲ್ಲಿ ನಡೆದಿದ್ದ ಮಾರಣ ಹೋಮದಲ್ಲಿ ಈ ಮೂವರು ನಕ್ಸಲೀಯರು ತಲಾ ೩೬ ಲಕ್ಷ ರೂ ಬಹುಮಾನ ಘೋಷಿಸಲಾಗಿತ್ತು. ಈಗ ಭದ್ರತಾ ಪಡೆ ನಡೆಸಿದ ಕಾರ್ಯಾಚರಣೆಯಲ್ಲಿ ಹತರಾಗಿದ್ದಾರೆ.
ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ೩೬ ಲಕ್ಷ ರೂಪಾಯಿ ಬಹುಮಾನ ತೆಲೆಯ ಮೇಲೆ ಹೊತ್ತಿದ್ದ ಮೂವರು ನಕ್ಸಲೀಯರನ್ನು ಭದ್ರತಾ ಪಡೆ ಎನ್‌ಕೌಂಟರ್‍ನಲ್ಲಿ ಹತ್ಯೆ ಮಾಡಿದೆ.ಅಹೇರಿ ತಹಸಿಲ್‌ನ ಮನ್ನೆ ರಾಜಾರಾಮ್‌ನಲ್ಲಿ ಎನ್‌ಕೌಂಟರ್ ಸಂಭವಿಸಿದೆ. ಘಟನೆ ನಡೆದ ಸ್ಥಳದಲ್ಲಿ ನಕ್ಸಲರ ಶವಗಳನ್ನು ವಶಪಡಿಸಿಕೊಂಡಿದ್ದಾರೆ, ಅವರ ಬಳಿ ಶಸ್ತ್ರಾಸ್ತ್ರಗಳು ಮತ್ತು ಇತರ ಸಾಮಗ್ರಿಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.ಕತ್ತಲೆಯಲ್ಲಿ ಗುಂಡಿನ ಚಕಮಕಿ ನಡೆದ ಹಿನ್ನೆಲೆಯಲ್ಲಿ ಇತರೆ ನಕ್ಸಲರು ಸ್ಥಳದಿಂದ ಪರಾರಿಯಾಗಿದ್ದು ಅವರಿಗಾಗಿ ಶೋಧ ಮುಂದುವರಿದಿದೆ.ಭಮ್ರಗಢ ತಾಲೂಕಿನಲ್ಲಿ ಸಿ-೬೦ ಕಮಾಂಡೋಗಳು ಮತ್ತು ಮಾವೋವಾದಿಗಳ ನಡುವೆ ಎನ್‌ಕೌಂಟರ್ ನಡೆದಿದೆ. ಅರಣ್ಯದಲ್ಲಿ ನಕ್ಸಲೀಯರು ಬೀಡು ಬಿಟ್ಟಿರುವ ಬಗ್ಗೆ ಗಸ್ತು ತಂಡಕ್ಕೆ ಮಾಹಿತಿ ಲಭ್ಯವಾಗಿತ್ತು. ಸಿ ೬೦ ಕಮಾಂಡರ್‌ಗಳಿಂದ ಶೋಧ ಕಾರ್ಯಾಚರಣೆ ನಡೆಸುವ ವೇಳೆ ಗಸ್ತು ತಿರುಗುತ್ತಿದ್ದ ತಂಡದ ಮೇಲೆ ನಕ್ಸಲೀಯರು ಗುಂಡು ಹಾರಿಸಿದರು. ಗುಂಡಿನ ಚಕಮಕಿಯಲ್ಲಿ ೩ ನಕ್ಸಲೀಯರು ಹತರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಛತ್ತೀಸ್‌ಗಡದ ದಾಂತೇವಾಡದಲ್ಲಿ ಇತ್ತೀಚೆಗೆ ನಡೆದ ನಕ್ಸಲೀಯರ ದಾಳಿಯ ನಂತರ ಕಮಾಂಡೋಗಳು ಮತ್ತು ಸ್ಥಳೀಯ ಪೊಲೀಸರು ಮಹಾರಾಷ್ಟ್ರ ಗಡಿಯಲ್ಲಿ ಕಟ್ಟೆಚ್ಚರ ವಹಿಸಿದ್ದಾರೆ. ಎನ್‌ಕೌಂಟರ್‌ನಲ್ಲಿ ೩ ಮಂದಿ ನಕ್ಸಲೀಯರು ಹತರಾದ ತಕ್ಷಣ ಇತರ ನಕ್ಸಲೀಯರು ಕತ್ತಲೆಯ ಲಾಭ ಪಡೆದು ಪರಾರಿಯಾಗಿದ್ದಾರೆ.ಹತ್ಯೆಯಾದ ನಕ್ಸಲೀಯರಲ್ಲಿ ಬಿಟಾಳು ಮಾದವಿ ಎಂಬಾತ, ವಿದ್ಯಾರ್ಥಿ ಸಾಯಿನಾಥ್ ನರೋಟೆ ಹತ್ಯೆಯ ಮಾಸ್ಟರ್ ಮೈಂಡ್. ಇದಕ್ಕೂ ಮುನ್ನ ನಕ್ಸಲೀಯರು ಮಾರ್ಚ್ ೯ ರಂದು ೨೬ ವರ್ಷದ ಸಾಯಿನಾಥ್ ಎಂಬ ವಿದ್ಯಾರ್ಥಿಯನ್ನು ಗುಂಡಿಕ್ಕಿ ಕೊಂದಿದ್ದರು. ವಿದ್ಯಾರ್ಥಿ ಪೊಲೀಸ್ ಮಾಹಿತಿದಾರರಾಗಿದ್ದು, ಪೊಲೀಸ್ ಪಡೆಗೆ ಸೇರಲು ಬಯಸಿದ್ದರು.ನರೋಟೆ ಕಾಲೇಜು ಮುಗಿಸಿ ಗಡ್ಚಿರೋಲಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರು. ಛತ್ತೀಸ್‌ಗಢ-ಮಹಾರಾಷ್ಟ್ರ ಗಡಿಯಲ್ಲಿರುವ ಮರ್ದುಹೂರ್ ಗ್ರಾಮದ ತಮ್ಮ ಮನೆಗೆ ಹೋಳಿ ಆಚರಣೆಗಾಗಿ ಬಂದಿದ್ದರು. ಆದರೆ, ಅವರು ಯಾವುದೋ ಕೆಲಸದ ನಿಮಿತ್ತ ಮನೆಯಿಂದ ಹೊರಟಾಗ ೧೦ರಿಂದ ೧೨ ಮಂದಿ ನಕ್ಸಲೀಯರು ಆತನನ್ನು ಅಪಹರಿಸಿ ಗುಂಡಿಕ್ಕಿ ಹತ್ಯೆ ಮಾಡಿದ್ದರು.