ಗುಂಡೇಟಿಗೆ ಐವರು ನಕ್ಸಲರು ಬಲಿ

ರಾಂಚಿ(ಜಾರ್ಖಂಡ್),ಏ.೩-ನ ಛತ್ರಾದಲ್ಲಿ ಪೊಲೀಸರು ಹಾಗೂ ನಕ್ಸಲರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಐವರು ನಕ್ಸಲರು ಮೃತಪಟ್ಟಿದ್ದಾರೆ.
ಎನ್‌ಕೌಂಟರ್‌ನಲ್ಲಿ ಮೃತಪಟ್ಟ ಐವರಲ್ಲಿ ಇಬ್ಬರ ತಲೆಗೆ ಪೊಲೀಸ್ ಇಲಾಖೆ ೨೫ ಲಕ್ಷ ಬಹಮಾನ ಘೋಷಿಸಿತ್ತು. ಹಾಗೆಯೇ ಇನ್ನಿಬ್ಬರಿಗೆ ೫ ಲಕ್ಷ ಹಣವನ್ನು ಘೋಷಣೆ ಮಾಡಲಾಗಿತ್ತು.ಬಂಧಿತರಿಂದ ೨ ಎಕೆ-೪೭ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದ್ದು. ಕಾರ್ಯಾಚರಣೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಛತ್ತೀಸ್‌ಗಢದ ನಕ್ಸಲ್ ಪೀಡಿತ ಕಂಕೇರ್ ಜಿಲ್ಲೆಯಲ್ಲಿ ನಿನ್ನೆ ಪೊಲೀಸ್ ಹಾಗೂ ಡಿಆರ್‌ಜಿ ಜಂಟಿ ತಂಡ ಕಾರ್ಯಾಚರಣೆ ನಡೆಸಿ ಮೂವರು ನಕ್ಸಲರನ್ನು ಬಂಧಿಸಿತ್ತು. ಪೊಲೀಸರ ಪ್ರಕಾರ ಸುಮನ್ ಸಿಂಗ್ ಅಂಚಲ್(೪೨)ಸುಮನ್ ಸಿಂಗ್ ಉಸೆಂಡಿ(೨೭) ಪರಶುರಾಮ್ ಧಂಗುಲ್(೫೫) ಬಂಧಿತ ಆರೋಪಿಗಳಾಗಿದ್ದಾರೆ. ಮರುವೇಷದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರ ಜಂಟಿ ತಂಡ ಕೊಯೆಲಿಬೆಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಅಂತಗರ್ ಹೆಚ್ಚುವರಿ ಎಸ್ ಪಿ ಖೊನಮ್ ಸಿನ್ಹಾ ಹೇಳಿದ್ದಾರೆ.
ಬಂಧಿತ ನಕ್ಸಲರ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿವೆ. ಕಟ್ಟಡ ನಿರ್ಮಾಣ ಪ್ರದೇಶದಲ್ಲಿ ವಾಹನಗಳನ್ನು ಸುಟ್ಟ ಪ್ರಕರಣ, ಮೊಬೈಲ್ ಟವರ್‌ಗಳಿಗೆ ಬೆಂಕಿ ಹಚ್ಚಿದ ಪ್ರಕರಣ, ಅಲ್ಲದೇ ಪೊಲೀಸ್ ಮಾಹಿತಿದಾರರು ಎಂದು ಮುಗ್ಧ ಜನರ ಮೇಲೆ ಹಲ್ಲೆ ಮಾಡಿದ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಎಎಸ್‌ಪಿ ಸಿನ್ಹಾ ಹೇಳಿದ್ದಾರೆ.