
ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಜು 24 :- ಗುಂಡುಮುಣುಗು ಗ್ರಾಮಪಂಚಾಯಿತಿಯ ಎರಡನೇ ಅವಧಿಯ ಅಧ್ಯಕ್ಷ – ಉಪಾಧ್ಯಕ್ಷ ಸ್ಥಾನಕ್ಕೆ ಇಂದು ನಿಗಧಿಪಡಿಸಿದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಸಿದ್ದಾಪುರ ವಡ್ಡರಹಟ್ಟಿಯ ಭಾಗ್ಯಮ್ಮ ಅಂಜಿನಪ್ಪ ಹಾಗೂ ಉಪಾಧ್ಯಕ್ಷರಾಗಿ ಭೀಮಸಮುದ್ರದ ಕವಿತಾ ಚನ್ನಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಗ್ರಾಮಪಂಚಾಯಿತಿ ಚುನಾವಣಾಧಿಕಾರಿಯಾಗಿರುವ ಕೂಡ್ಲಿಗಿ ಸಿಡಿಪಿಒ ನಾಗನಗೌಡ ಪಾಟೀಲ್ ಘೋಷಿಸಿದ್ದಾರೆ.
ಇಂದು ಬೆಳಿಗ್ಗೆ 10ಗಂಟೆಯಿಂದ 12ಗಂಟೆ ಅವಧಿಯಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಒಟ್ಟು 26 ಸದಸ್ಯರ ಬಲಾಬಲ ಹೊಂದಿರುವ ಗುಂಡುಮುಣುಗು ಗ್ರಾಮಪಂಚಾಯಿತಿಯ ಎರಡನೇ ಅವಧಿಯ ಅಧ್ಯಕ್ಷ ಸ್ಥಾನಕ್ಕೆ ಅನುಸೂಚಿತ ಜಾತಿ ಮೀಸಲಾತಿಯಲ್ಲಿ ಸಿದ್ದಾಪುರದ ಭಾಗ್ಯಮ್ಮ ಅಂಜಿನಪ್ಪ ಅವರು ಒಬ್ಬರೇ ನಾಮಪತ್ರ ಸಲ್ಲಿಸಿದ್ದು ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಮೀಸಲಾತಿಯಲ್ಲಿ ಭೀಮಸಮುದ್ರ ಕವಿತಾ ಚನ್ನಪ್ಪ ಅವರು ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಇಬ್ಬರ ಆಯ್ಕೆಯನ್ನು ಅವಿರೋಧ ಆಯ್ಕೆ ಎಂದು ಘೋಷಿಸಿದ್ದಾರೆ ಒಟ್ಟು 26ಸದಸ್ಯರಲ್ಲಿ 25 ಸದಸ್ಯರು ಹಾಜರಿದ್ದು ಓರ್ವ ಸದಸ್ಯ ಮಾತ್ರ ಗೈರಾಗಿದ್ದರು ಎಂದು ತಿಳಿದಿದೆ.
ಈ ಸಂದರ್ಭದಲ್ಲಿ ಚುನಾವಣಾಧಿಕಾರಿಗಳಾಗಿ ಕೂಡ್ಲಿಗಿ ಸಿಡಿಪಿಒ ನಾಗನಗೌಡ, ಸಹಾಯಕರಾಗಿ ಕಂದಾಯ ಇಲಾಖೆಯ ಈಶಪ್ಪ,ಹಾಜರಿದ್ದು, ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಕಾರ್ಯದರ್ಶಿ ಮತ್ತು ಮುಖಂಡರಾದ ಗುಂಡು ಮುಣುಗು ತಿಪ್ಪೇಸ್ವಾಮಿ, ಚಂದ್ರಮೌಳಿ ಹಾಗೂ ಇತರರು ಉಪಸ್ಥಿತರಿದ್ದರು.