ಗುಂಡಿ ಬಿದ್ದ ರಸ್ತೆಗಳು ಎಎಪಿ ಜನಜಾಗೃತಿ

ಬೆಂಗಳೂರು, ಡಿ.೪- ಬೆಂಗಳೂರಿನ ರಸ್ತೆ ಕಾಮಗಾರಿಗಳಲ್ಲಿ ವ್ಯಾಪಕ ಭ್ರಷ್ಟಾಚಾರ ಹಾಗೂ ನಗರದೆಲ್ಲೆಡೆ ಗುಂಡಿಗಳು ಬಿದ್ದಿರುವುದನ್ನು ಖಂಡಿಸಿ ಬೃಹತ್ ಸಹಿ ಸಂಗ್ರಹ ಅಭಿಯಾನಕ್ಕೆ ಆಮ್ ಆದ್ಮಿ ಪಕ್ಷ ಚಾಲನೆ ನೀಡಿತು.
ನಗರದಲ್ಲಿಂದು ಮೆಜೆಸ್ಟಿಕ್ ರೈಲ್ವೆ ನಿಲ್ದಾಣ ಸಮೀಪದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಬಳಿ ಪಕ್ಷದ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ, ಅಭಿಯಾನಕ್ಕೆ ಚಾಲನೆ ನೀಡಿದರು.
ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ತೆರೆದ ವಾಹನವನ್ನು ಬಳಸಿಕೊಂಡು ಬೆಂಗಳೂರಿನಾದ್ಯಂತ ಜನಜಾಗೃತಿಗೆ ಆಮ್ ಆದ್ಮಿ ಪಾರ್ಟಿ ಮುಂದಾಗಿದ್ದು, ಮೊದಲ ದಿನದಂದು ವಾಹನವು ಗಾಂಧಿನಗರ, ಮಲ್ಲೇಶ್ವರಂ, ರಾಜಾಜಿನಗರ, ಚಿಕ್ಕಪೇಟೆ ಮಾರ್ಗದಲ್ಲಿ ಸಾಗಿ ಆರ್ಮುಗಂ ವೃತ್ತ ತಲುಪಿದೆ ಎಂದರು.
ಸರ್ಕಾರದ ಬೊಕ್ಕಸದಿಂದ ಬರೋಬ್ಬರಿ ೨೦ ಸಾವಿರ ಕೋಟಿ ರೂಪಾಯಿಗಿಂತಲೂ ಅಧಿಕ ಹಣ ಖರ್ಚಾಗಿದ್ದರೂ ಬೆಂಗಳೂರಿನ ರಸ್ತೆಗಳ ತುಂಬಾ ಗುಂಡಿಗಳಿವೆ. ಇದರಿಂದಾಗಿ ಅಮಾಯಕ ವಾಹನ ಸವಾರರು ಕೈಕಾಲು ಮುರಿದುಕೊಂಡು ಜೀವ ಕಳೆದುಕೊಳ್ಳುತ್ತಿದ್ದಾರೆ ಎಂದು ದೂರಿದರು.
ಸಂಚಾರ ದಟ್ಟಣೆ ಸಮಸ್ಯೆಗೂ ಗುಂಡಿಗಳು ಕಾರಣ. ರಸ್ತೆ ಕಾಮಗಾರಿಗಳಲ್ಲಾದ ಅಕ್ರಮವನ್ನು ಹತ್ತು ದಿನಗಳ ಸಹಿ ಸಂಗ್ರಹ ಅಭಿಯಾನದ ಮೂಲಕ ಮನೆಮನೆಗೆ ತಲುಪಿಸಿ ಜಾಗೃತಿ ಮೂಡಿಸುತ್ತೇವೆ. ಸರ್ಕಾರ ಮಾಡಿರುವ ಈ ಅನ್ಯಾಯದ ವಿರುದ್ಧ ಜನತಾ ನ್ಯಾಯಾಲಯದಲ್ಲಿ ನ್ಯಾಯ ಸಿಗುವ ವಿಶ್ವಾಸವಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಪ್ ನಾಯಕರಾದ ಬಿ.ಟಿ.ನಾಗಣ್ಣ, ಸುರೇಶ್ ರಾಥೋಡ್, ಜಗದೀಶ್ ಚಂದ್ರ, ಉಷಾ ಮೋಹನ್, ಪಲ್ಲವಿ ಚಿದಂಬರಂ, ಅಶೋಕ್ ಮೃತ್ಯುಂಜಯ. ವಿಜಯ್ ಶಾಸ್ತ್ರಿಮಠ್ ಹಾಗೂ ಇನ್ನಿತರೆ ಮುಖಂಡರು, ಕಾರ್ಯಕರ್ತರು, ಸಾರ್ವಜನಿಕರು ಅಭಿಯಾನದಲ್ಲಿ ಭಾಗಿಯಾಗಿದ್ದರು.