ಗುಂಡಿನ ದಾಳಿ; ರಾಜಕೀಯ ಪ್ರಚೋದಿತ-ಮೋದಿ ಆರೋಪ

ಕಲಬುರಗಿ,ಜ 8: ಕಲಬುರಗಿ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಉದ್ದೇಶಪೂರ್ವಕವಾಗಿಯೇ ಕಾನೂನು ಸುವ್ಯವಸ್ಥೆ ಹಾಳು ಮಾಡುವ ನಿರಂತರ ಯತ್ನಗಳು ನಡೆಯುತ್ತಿದ್ದು, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸಂತೋಷ್ ಪಾಟೀಲ್ ಧಣ್ಣೂರ್ ಅವರ ಸಹೋದರನ ಮೇಲೆ ನಡೆದಿರುವ ಗುಂಡಿನ ದಾಳಿ ರಾಜಕೀಯ ಪ್ರೇರಿತ ಎಂದು ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶರಣಕುಮಾರ್ ಮೋದಿ ಟೀಕಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆಯೊಂದನ್ನು ನೀಡಿರುವ ಅವರು, ಕಾಂಗ್ರೆಸ್ ಮುಖಂಡ ಸಂತೋಷ್ ಪಾಟೀಲ್ ದಣ್ಣೂರ್ ಅವರ ಸಹೋದರ ಚನ್ನವೀರ ಪಾಟೀಲ್ ಮೇಲೆ ಗುಂಡಿನ ದಾಳಿ ನಡೆದಿದೆ. ಮೇಲ್ನೋಟದಲ್ಲಿ ಇದೊಂದು ಆಸ್ತಿವಿವಾದಕ್ಕೆ ಸಂಬಂಧಿಸಿದ ಕಲಹ ಎಂದು ಬಿಂಬಿಸಲಾಗುತ್ತಿದೆಯಾದರೂ, ಪ್ರಬಲರು ನಿರ್ಭೀತರಾಗಿ ಶಸ್ತ್ರಾಸ್ತ್ರ ಹಿಡಿದು ತಿರುಗುವಂತಹ ವಾತಾವರಣವನ್ನು ಕಲಬುರಗಿ ದಕ್ಷಿಣ ಕ್ಷೇತ್ರದಲ್ಲಿ ಸೃಷ್ಟಿಸುವ ಕೆಲಸವನ್ನು ಸರಕಾರದ ಭಾಗವಾಗಿರುವ ಕೆಲವರು ಮಾಡುತ್ತಿದ್ದಾರೆ. ಆ ಮೂಲಕ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಭಯಭೀತರಾಗಿ ಮನೆ ಸೇರುವಂತೆ ಮಾಡುವ ಹತಾಶ ಪ್ರಯೋಗಗಳನ್ನು ಮಾಡಲಾಗುತ್ತಿದೆ ಎಂದು ಅವರು ವ್ಯಾಖ್ಯಾನಿಸಿದ್ದಾರೆ.
ಕಲಬುರಗಿ ಜಿಲ್ಲೆ ಒಳಗೊಂಡಂತೆ ರಾಜ್ಯಾದ್ಯಂತ ರೌಡಿಗಳ ಮೂಲಕ ಸರಕಾರಿ ವರ್ಗಾವಣೆಗಳನ್ನು ನಡೆಸುತ್ತಿರುವುದು ಈಗಾಗಲೇ ಸ್ಯಾಂಟ್ರೊ ರವಿ ಪ್ರಕರಣದಿಂದ ಬಯಲಾಗಿದೆ. ಮತ್ತೊಂದೆಡೆ, ಆಸ್ತಿ ವಿವಾದದ ನೆಪದಲ್ಲಿ ಕಾಂಗ್ರೆಸ್ ಮುಖಂಡರನ್ನು ಹೆದರಿಸಿ ಈಗಿನಿಂದಲೇ ಅವರು ಚುನಾವಣಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳದಂತೆ ನೋಡಿಕೊಳ್ಳುವ ಕುಟಿಲ ತಂತ್ರಗಳನ್ನು ಅನುಸರಿಸಲಾಗುತ್ತಿದೆ. ಆದ್ದರಿಂದ, ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಇಂತಹ ಹುಸಿ ತಂತ್ರಗಾರಿಕೆಗಳಿಗೆ ಸೊಪ್ಪು ಹಾಕಬಾರದು. ಜೊತೆಗೆ, ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಪಟ್ಟಭದ್ರ ಹಿತಾಸಕ್ತಿಗಳು ಹಾಗೂ ರೌಡಿಗಳ ಪರವಾಗಿ ಸ್ವತಃ ರಾಜ್ಯ ಸರಕಾರ ಕಾರ್ಯನಿರ್ವಹಿಸುತ್ತಿರುವುದನ್ನು ಜನರಿಗೆ ಮನದಟ್ಟು ಮಾಡಿಸುವ ಕೆಲಸವನ್ನು ಜಿಲ್ಲೆಯ ಎಲ್ಲ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಮಾಡಬೇಕೆಂದು ಅವರು ಕರೆ ನೀಡಿದ್ದಾರೆ