ಗುಂಡಿನ ದಾಳಿ: ನಾಲ್ವರ ಬಂಧನ

ಕಲಬುರಗಿ,ಜ.9-ಆಸ್ತಿ ವಿವಾದ ಹಿನ್ನೆಲೆಯಲ್ಲಿ ಶನಿವಾರ ನಗರದ ಆಳಂದ ಚೆಕ್ ಪೆÇೀಸ್ಟ್ ಹತ್ತಿರ ಕಾಂಗ್ರೆಸ್ ಮುಖಂಡ ಹಾಗೂ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಸಂತೋಷ ಪಾಟೀಲ ದಣ್ಣೂರ್ ಅವರ ಸಹೋದರ ಚನ್ನವೀರ ಪಾಟೀಲ ದಣ್ಣೂರ ಮೇಲೆ ಗುಂಡಿನ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಸಬ್ ಅರ್ಬನ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಆಳಂದ ತಾಲ್ಲೂಕಿನ ಭಟ್ಟರ್ಗಾ ಗ್ರಾಮದ ನಿವಾಸಿಗಳಾದ ದಸ್ತಯ್ಯ ಗುತ್ತೇದಾರ, ಶಾಂತಾಬಾಯಿ ದಸ್ತಯ್ಯ ಗುತ್ತೇದಾರ, ರಾಜು ದಸ್ತಯ್ಯ ಗುತ್ತೇದಾರ ಹಾಗೂ ಸಂದೇಶ ಜೇಮಸಿಂಗ್ ಪವಾರ್ ಎಂಬುವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಪ್ರಕರಣ ಪ್ರಮುಖ ಆರೋಪಿ ಬಸಯ್ಯ ಗುತ್ತೇದಾರ ಅವರ ತಂದೆ, ತಾಯಿ, ಸಹೋದರ ಸೇರಿ ನಾಲ್ವರನ್ನು ಬಂಧಿಸಿ ಒಂದು ಬುಲೆರೋ ವಾಹನ, ಬೈಕ್ ವಶಪಡಿಸಿಕೊಳ್ಳಲಾಗಿದೆ. ಪ್ರಕರಣದ ಪ್ರಮುಖ ಆರೋಪಿ ಬಸಯ್ಯ ಗುತ್ತೇದಾರ ಸೇರಿ ಇನ್ನುಳಿದ ಆರೋಪಿಗಳ ಪತ್ತೆಗೆ ಜಾಲ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಿನ್ನೆಲೆ
ಶನಿವಾರ ಆಳಂದ್ ಚೆಕ್‍ಪೋಸ್ಟ್ ಹತ್ತಿರ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಮುಖಂಡ ಸಂತೋಷ ವಿ.ಪಾಟೀಲ ದಣ್ಣೂರ ಅವರ ಸಹೋದರ ಚನ್ನವೀರ ಪಾಟೀಲ ಮತ್ತು ಬಸಯ್ಯ ಗುತ್ತೇದಾರ ನಡುವೆ ಜಗಳ ನಡೆದಿತ್ತು. ಜಗಳ ವಿಕೋಪಕ್ಕೆ ತಿರುಗಿ ಬಸಯ್ಯ ಗುತ್ತೇದಾರ ಚನ್ನವೀರ ಪಾಟೀಲ ಮೇಲೆ ಗುಂಡು ಹಾರಿಸಿದ್ದ. ಕೈಗೆ ಗುಂಡೇಟು ಬಿದ್ದಿತ್ತು. ಈ ವೇಳೆ ಜಗಳ ನೋಡುತ್ತ ನಿಂತಿದ್ದ ಎಂ.ಎಸ್.ಕೆ.ಮಿಲ್ ನಿವಾಸಿ ಶೇಖ್ ಅಬೂಬಕರ್ ಸಿದ್ದಿಕಿ ಎಂಬಾತನಿಗೂ ಗುಂಡೇಟು ತಗುಲಿತ್ತು. ಗುಂಡೇಟು ತಗುಲಿ ಗಾಯಗೊಂಡಿದ್ದ ಇಬ್ಬರನ್ನು ತಕ್ಷಣವೇ ನಗರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಹಾಡು ಹಗಲೇ ನಡೆದ ಈ ಘಟನೆಯಿಂದ ಆಳಂದ್ ಚೆಕ್‍ಪೋಸ್ಟ್ ಹತ್ತಿರ ಬಸ್ಸಿಗಾಗಿ ಕಾಯುತ್ತ ನಿಂತಿದ್ದ ಜನ ಚೆಲ್ಲಾಪಿಲ್ಲೆಯಾಗಿ ಓಡಿದ್ದರು. ಈ ಪ್ರಕರಣದಿಂದಾಗಿ ಆಳಂದ್ ಚೆಕ್‍ಪೋಸ್ಟ್‍ನಲ್ಲಿ ಕೆಲಕಾಲ ಭಯ ಮತ್ತು ಆತಂಕದ ವಾತಾವರಣ ನಿರ್ಮಾಣವಾಗಿತ್ತು.