ಗುಂಡಿಟ್ಟು ಮೂವರು ಸಹಪಾಠಿಗಳ ಕೊಂದ ವಿದ್ಯಾರ್ಥಿ

ವಾಷಿಂಗ್ಟನ್,ಡಿ.೧- ಮಿಚಿಗನ್ ಶಾಲೆಯಲ್ಲಿ ೧೫ ವರ್ಷದ ವಿದ್ಯಾರ್ಥಿಯೊಬ್ಬ ಏಕಾಏಕಿ ಗುಂಡು ಹಾರಿಸಿ ಮೂವರು ವಿದ್ಯಾರ್ಥಿಗಳನ್ನು ಹತ್ಯೆ ಮಾಡಿದ್ದಾನೆ. ಈ ಘಟನೆಯಲ್ಲಿ ಶಿಕ್ಷಕಿ ಸೇರಿದಂತೆ ೮ ಮಂದಿ ಗಾಯಗೊಂಡಿದ್ದಾರೆ.
ಗುಂಡು ಹಾರಿಸಿದ ವಿದ್ಯಾರ್ಥಿ ಪೊಲೀಸರಿಗೆ ಶರಣಾಗಿದ್ದಾನೆ. ಈ ವರ್ಷದಲ್ಲಿ ನಡೆದ ಭೀಕರ ದಾಳಿ ಇದಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಆಕ್ಲೇನ್‌ಕೊಂಟಿಯಲ್ಲಿರುವ ಆಕ್ಸ್‌ಫರ್ಡ್ ಪ್ರೌಢಶಾಲೆಯಲ್ಲಿ ಮಧ್ಯಾಹ್ನದ ವೇಳೆ ತರಗತಿ ನಡೆಯುತ್ತಿದ್ದಾಗ ಈ ಗುಂಡಿನ ದಾಳಿ ನಡೆದಿದೆ.
ಗಾಯಗೊಂಡವರ ಪೈಕಿ ೬ ಮಂದಿಯ ಆರೋಗ್ಯ ಸ್ಥಿರವಾಗಿದ್ದು, ಇನ್ನಿಬ್ಬರಿಗೆ ಚಿಕಿತ್ಸೆ ನೀಡಲಾಗಿದೆ. ಗುಂಡು ಹಾರಿಸಿದ ವಿದ್ಯಾರ್ಥಿಯನ್ನು ವಶಕ್ಕೆ ತೆಗೆದುಕೊಂಡಿದ್ದು, ಪಿಸ್ತೂಲನ್ನು ವಶಪಡಿಸಿಕೊಳ್ಳಲಾಗಿದೆ. ಈ ದಾಳಿಯ ಹಿಂದಿನ ಉದ್ದೇಶ ನಿಖರವಾಗಿ ತಿಳಿದು ಬಂದಿಲ್ಲ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.