ಗುಂಡಿಗೆ ಬಿದ್ದು ಬಾಲಕರ ಸಾವು

ಕಲಬುರಗಿ, ಜು.೨೩- ಮಳೆ ನೀರು ತುಂಬಿದ್ದ ಗುಂಡಿಗೆ ಬಿದ್ದು ಬಾಲಕರಿಬ್ಬರು ಸಾವನ್ನಪ್ಪಿರುವ ಘಟನೆ ನಗರದ ದುಬೈ ಕಾಲೋನಿಯಲ್ಲಿ ನಡೆದಿದೆ.
ಸಂಜಯ ಗಾಂಧಿ ನಗರದ ಅಭಿಷೇಕ ತಂದೆ ಸುರೇಶ ಕನ್ನೋಲ್ (೧೨) ಮತ್ತು ಅಜಯ್ ತಂದೆ ಭೀಮರಾಯ ನೆಲೋಗಿ (೧೨) ಮೃತಪಟ್ಟ ಬಾಲಕರು.
ದುಬೈ ಕಾಲೋನಿಯ ಚೈಲ್ಡ್ ಹುಡ್ ಆಸ್ಪತ್ರೆಯ ಮುಂದೆ (ಹಳೆಯ ಕುಷ್ಠರೋಗಿಗಳ ಆಸ್ಪತ್ರೆ ಹತ್ತಿರ) ಕುಡಿಯುವ ನೀರಿನ ಟ್ಯಾಂಕ್ ನಿರ್ಮಾಣಕ್ಕಾಗಿ ತಗ್ಗು ತೋಡಲಾಗಿದ್ದು, ನಿರಂತರ ಮಳೆಯಿಂದ ತಗ್ಗುಗುಂಡಿ ಸಂಪೂರ್ಣ ಭರ್ತಿಯಾಗಿತ್ತು.
ನಿನ್ನೆ ಸಾಯಂಕಾಲ ಬಾಲಕರಿಬ್ಬರು ಆಟವಾಡಲು ಹೋಗಿ ಕಾಲುಜಾರಿ ತಗ್ಗು ಗುಂಡಿಯಲ್ಲಿ ಬಿದ್ದು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಅಗ್ನಿಶಾಮಕ ದಳ ಸಿಬ್ಬಂದಿ ಬಾಲಕರ ಮೃತದೇಹಗಳನ್ನು ಹೊರ ತೆಗೆದಿದ್ದಾರೆ. ಸುದ್ದಿ ತಿಳಿದು ಚೌಕ್ ಪೊಲೀಸ್ ಠಾಣೆ ಪಿಐ ರಾಜಶೇಖರ ಹಳಿಗೋದಿ ಮತ್ತು ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.
ಸ್ಥಳದಲ್ಲಿ ಮೃತ ಬಾಲಕರ ಪಾಲಕರು ಮತ್ತು ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಈ ಸಂಬಂಧ ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.