ಗುಂಡಿಗಳಿಂದ ತುಂಬಿದ ರಸ್ತೆ

ಲಕ್ಷ್ಮೇಶ್ವರ,ಜೂ14 : ಸುರಣಗಿ ಬೆಳ್ಳಟ್ಟಿ ಮಧ್ಯದ ರಾಜ್ಯ ಹೆದ್ದಾರಿ ಕಲ್ಮಲಾ ಶಿಗ್ಗಾವ್ ರಸ್ತೆಯು ಸಂಪೂರ್ಣ ಹಾಳಾಗಿದ್ದು ರಾಜ್ಯ ಹೆದ್ದಾರಿಯಲ್ಲಿ ಗುಂಡಿಗಳದ್ದೇ ದರ್ಬಾರ್ ಆಗಿದೆ.
ಈ ರಸ್ತೆಯನ್ನು ಕಳೆದ ವರ್ಷವಷ್ಟೇ ಸುಮಾರು 80 ಲಕ್ಷ ರೂ ವೆಚ್ಚದಲ್ಲಿ ಮರು ಡಾಂಬರೀಕರಣ ಮಾಡಲಾಗಿತ್ತು. ಈಗ ಅದೇ ರಸ್ತೆಯಲ್ಲಿ ಎಲ್ಲೆಂದರಲ್ಲಿ ತಗ್ಗು ಗುಂಡಿಗಳು ಕಾಣಿಸಿಕೊಂಡಿದ್ದು ವಾಹನ ಸವಾರರು ಎಡಗೈ ಮುಷ್ಟಿಯಲ್ಲಿ ಜೀವ ಹಿಡಿದುಕೊಂಡು ಸಾಗುವ ಸ್ಥಿತಿ ನಿರ್ಮಾಣವಾಗಿದೆ ಆದರೆ ಸಂಬಂಧ ಪಟ್ಟ ಲೋಕೋಪಯೋಗಿ ಇಲಾಖೆಯ ಇಂಜಿನಿಯರ್‍ಗಳು ಈ ರಸ್ತೆ ನಮ್ಮದು ಅಲ್ಲವೇ ಅಲ್ಲ ಎಂಬಂತ ಉದಾಸಿನ ಮನೋಭಾವದಲ್ಲಿ ಕಾಲ ಕಳೆಯುತ್ತಿದ್ದಾರೆ.
ಕೊನೆಯ ಪಕ್ಷ ಬಿದ್ದಿರುವ ಗುಂಡಿಗಳಿಗೆ ಮಣ್ಣನ್ನಾದರೂ ಹಾಕಿ ಗುಂಡಿಗಳನ್ನು ಮುಚ್ಚಿ ಜನಸಾಮಾನ್ಯರು ಸಂಚರಿಸಲು ಅನುಕೂಲ ಮಾಡಿಕೊಡಬೇಕಾಗಿತ್ತು ಆದರೆ ಸದ್ಯದ ರಸ್ತೆಯ ಸ್ಥಿತಿಯನ್ನು ಗಮನಿಸಿದರೆ ಸುಧಾರಣೆಯಾಗಲು ಸಾಧ್ಯವೇ ಇಲ್ಲ ಎಂಬ ರೀತಿಯಲ್ಲಿ ರಸ್ತೆ ಹಾಳಾಗಿದೆ.
ಈ ಕುರಿತು ಸುರುಣಗಿ ಗ್ರಾಮದ ಗ್ರಾಮಸ್ಥರು ಅಕ್ರೋಶ ವ್ಯಕ್ತಪಡಿಸಿ ಬೆಳ್ಳಟ್ಟಿ ಮುಂಡರಿಗಿ ಮತ್ತು ಕೊಪ್ಪಳಕ್ಕೆ ಸಂಪರ್ಕ ಕಲ್ಪಿಸುವ ಈ ರಸ್ತೆ ಅತ್ಯಂತ ಪ್ರಮುಖವಾಗಿದ್ದು ಪಿಡಬ್ಲ್ಯೂಡಿ ಅವರು ಈ ರಸ್ತೆಯನ್ನು ಸುಧಾರಣೆ ಮಾಡದಿದ್ದರೆ ಪ್ರತಿಭಟನೆ ಕೈಗೊಳ್ಳುವದಾಗಿ ಎಚ್ಚರಿಸಿದ್ದಾರೆ.