ಗುಂಡಿಕ್ಕಿ ಸಹಪಾಠಿ ಕೊಲೆಗೈದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ

ನವದೆಹಲಿ,ಜ.೧- ದೇಶಾದ್ಯಂತ ಹಲವೆಡೆ ಶಾಲಾ-ಕಾಲೇಜುಗಳು ಆರಂಭಗೊಂಡಿರುವ ಬೆನ್ನಲ್ಲೇ ಕ್ಲುಲಕ ಕಾರಣಕ್ಕೆ ನಡೆದ ಜಗಳದಲ್ಲಿ ಆಕ್ರೋಶ ಗೊಂಡ ೧೪ ವರ್ಷದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಯೊಬ್ಬ ತನ್ನ ಸಹಪಾಠಿ ಮೇಲೆ ಮೂರು ಸುತ್ತು ಗುಂಡು ಹಾರಿಸಿ ಕೊಲೆ ಮಾಡಿರುವ ದಾರುಣ ಘಟನೆ ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿರುವ ಶಿಕಾರ್ಪುರ್ ನಗರದಲ್ಲಿ ನಡೆದಿದೆ.
ಶಿಕರ್‌ಪುರದ ಸೂರಜ್ ಭಾನ್ ಸರಸ್ವತಿ ಶಾಲೆಯ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ತನ್ನ ಜಾಗದಲ್ಲಿ ಕುಳಿತಿದ್ದ ಇನ್ನೋರ್ವ ವಿದ್ಯಾರ್ಥಿಯನ್ನು ಹಿಂದಿನ ಬೆಂಚಿಗೆ ಹೋಗಿ ಕೂರುವಂತೆ ಗಲಾಟೆ ಮಾಡಿದ್ದ.
ಇದರಿಂದ ಇಬ್ಬರ ನಡುವೆ ವಾಗ್ವಾದ ನಡೆದಿತ್ತು. ತನ್ನ ಸೀಟಿನಲ್ಲಿ ಕುಳಿತಿದ್ದ ಸಹಪಾಠಿಯ ವರ್ತನೆಯಿಂದ ಕೋಪಗೊಂಡಿದ್ದ ಆ ವಿದ್ಯಾರ್ಥಿ ಶಾಲೆಗೆ ಬರುವಾಗ ಗನ್ ತೆಗೆದುಕೊಂಡು ಬಂದಿದ್ದ. ಮನೆಯಿಂದ ತಂದಿದ್ದ ಪಿಸ್ತೂಲನ್ನು ತನ್ನ ಸ್ಕೂಲ್ ಬ್ಯಾಗ್‌ನಲ್ಲಿ ಬಚ್ಚಿಟ್ಟುಕೊಂಡಿದ್ದ. ಎರಡು ತರಗತಿಗಳು ನಡೆದ ಬಳಿಕ ಬ್ಯಾಗ್‌ನಿಂದ ಪಿಸ್ತೂಲ್ ಹೊರತೆಗೆದು ತನ್ನ ಸಹಪಾಠಿಯ ಮೇಲೆ ಮೂರು ಬಾರಿ ಗುಂಡು ಹಾರಿಸಿದ್ದ.
ತಕ್ಷಣ ಗಾಯಗೊಂಡ ಬಾಲಕನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ, ಗುಂಡಿನ ಹೊಡೆತಕ್ಕೆ ಬಾಲಕ ಮಾರ್ಗಮಧ್ಯೆ ಸಾವನ್ನಪ್ಪಿದ್ದ.
ಶಾಲೆಯಲ್ಲಿ ಗುಂಡಿನ ಶಬ್ದ ಮೊಳಗುತ್ತಿದ್ದಂತೆ ವಿದ್ಯಾರ್ಥಿಗಳು, ಶಿಕ್ಷಕರು ಗಾಬರಿಯಾಗಿ ಹೊರಗೆ ಓಡಿಬಂದಿದ್ದರು. ಗುಂಡು ಹಾರಿಸಿದ ವಿದ್ಯಾರ್ಥಿ ಕೂಡ ಗಾಬರಿಯಿಂದ ಓಡಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದ. ಆಗ ಶಾಲಾ ಸಿಬ್ಬಂದಿಗಳು ಆತನನ್ನು ಅಡ್ಡಗಟ್ಟಿ ಹಿಡಿದಿದ್ದರು. ನಂತರ ಪೊಲೀಸರಿಗೆ ವಿಷಯ ತಿಳಿಸಿದ್ದರು.
ಆ ಅಪ್ರಾಪ್ತ ಯುವಕನನ್ನು ವಿಚಾರಣೆಗೆ ಒಳಪಡಿಸಿರುವ ಪೊಲೀಸರು ಪಿಸ್ತೂಲನ್ನು ವಶಕ್ಕೆ ಪಡೆದಿದ್ದಾರೆ. ಆ ಪಿಸ್ತೂಲ್ ಆತನ ಕೈಸೇರಿದ್ದು ಹೇಗೆ ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ.
ಮೂಲಗಳ ಪ್ರಕಾರ ಕೃತ್ಯ ವೆಸಗಿದ ಬಾಲಕನ ಚಿಕ್ಕಪ್ಪ ಮಿಲಿಟರಿಯಲ್ಲಿ ಕೆಲಸ ಮಾಡುತ್ತಿದ್ದು, ಆ ಪಿಸ್ತೂಲ್?ಗೂ ಅವರು ಲೈಸೆನ್ಸ್ ಪಡೆದಿದ್ದರು. ರಜೆಯ ಮೇಲೆ ಮನೆಯಲ್ಲಿದ್ದ ಅವರ ಪಿಸ್ತೂಲನ್ನು ಬಾಲಕ ಬ್ಯಾಗ್‌ನಲ್ಲಿ ಯಾರಿಗೂ ಗೊತ್ತಾಗದಂತೆ ತಂದಿಟ್ಟುಕೊಂಡು ಬಂದು ಈ ಕೃತ್ಯ ವೆಸಗಿದ್ದ ಎಂದು ತಿಳಿದುಬಂದಿದೆ.