ಗುಂಡಿಕ್ಕಿ ರೌಡಿ ಪಳನಿ ಸೆರೆ

ಬೆಂಗಳೂರು,ನ.೧೭-ಕೊಲೆ,ಕೊಲೆಯತ್ನ,ಸುಲಿಗೆ,ಅಪಹರಣ,ಬೆದರಿಕೆ ಸೇರಿದಂತೆ ೨೦ಕ್ಕೂ ಹೆಚ್ಚು ಗಂಭೀರ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಕುಖ್ಯಾತ ನಟೋರಿಯಸ್ ರೌಡಿ ಪಳನಿ ಅಲಿಯಾಸ್ ಕರ್ಚೀಫ್ ಪಳನಿಗೆ ಸಿಸಿಬಿ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ.
ಇನ್ಸ್?ಪೆಕ್ಟರ್ ಹರೀಶ್ ಕುಮಾರ್ ಮೇಲೆ ಡ್ರಾಗರ್ ನಿಂದ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿ ಕಾಲಿಗೆ ಗುಂಡೇಟು ತಿಂದಿರುವ ಎಲ್ ಆರ್ ನಗರ ಪಳನಿ ಅಲಿಯಾಸ್ ಕರ್ಚೀಫ್ ಪಳನಿ(೩೫) ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.
ಜಯನಗರದ ಕೊಲೆಯತ್ನ,ಬೆಳ್ಳಂದೂರಿನ ಕೊಲೆ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಕರ್ಚೀಫ್ ಪಳನಿ ನಿನ್ನೆ ತಡರಾತ್ರಿ ಆಶೋಕನಗರದ ಸಿಮೆಟ್ರಿ ರಸ್ತೆಯ ಕ್ರಿಶ್ಚಿಯನ್ ಸ್ಮಶಾನದ ಬಳಿ ಅಡಗಿಕೊಂಡಿದ್ದ ಬಗ್ಗೆ ಖಚಿತ ಮಾಹಿತಿ ಪಡೆದು ಸಿಸಿಬಿ ರೌಡಿ ನಿಗ್ರಹದಳದ ಎಸಿಪಿ ಹೆಚ್.ಎಸ್.ಪರಮೇಶ್ವರ್ ಹಾಗೂ ಇನ್ಸ್‌ಪೆಕ್ಟರ್ ಹರೀಶ್ ಕುಮಾರ್ ನೇತೃತ್ವದ ತಂಡವು ಕಾರ್ಯಾಚರಣೆ ನಡೆಸಿದೆ.
ಪೊಲೀಸರನ್ನು ಕಂಡ ಕೂಡಲೇ ಪಳನಿ ಓಡಲು ಯತ್ನಿಸಿದ್ದು ಬೆನ್ನಟ್ಟಿ ಹಿಡಿಯಲು ಇನ್ಸ್‌ಪೆಕ್ಟರ್ ಹರೀಶ್ ಕುಮಾರ್ ಅವರ ಎಡಗೈ ಡ್ರ್ಯಾಗರ್‌ನಿಂದ ಚುಚ್ಚಿದ್ದ.
ಆತ್ಮ ರಕ್ಷಣೆಗಾಗಿ ಶರಣಾಗುವಂತೆ ಸೂಚಿಸಿ ಗಾಳಿಯಲ್ಲಿ ಎಸಿಪಿ ಹೆಚ್.ಎಸ್.ಪರಮೇಶ್ವರ್ ಅವರು ಗುಂಡು ಹಾರಿಸಿದರೂ ಅವರ ಮೇಲೆಯೇ ಹಲ್ಲೆಗೆ ಮುಂದಾಗಿದ್ದ.
ಈ ವೇಳೆ ಮತ್ತೊಂದು ಸುತ್ತು ಗುಂಡು ಹಾರಿಸಿದ್ದು ಅದು ಕಾಲಿಗೆ ತಗುಲಿ ಕುಸಿದು ಬಿದ್ದ ಪಳನಿಯನ್ನು ವಶಕ್ಕೆ ಪಡೆದು ಚಿಕಿತ್ಸೆಗಾಗಿ ಬೌರಿಂಗ್ ಆಸ್ಪತ್ರೆ ಸೇರಿಸಲಾಗಿದೆ ಎಂದು ತಿಳಿಸಿದ್ದಾರೆ.
ಬೆಳ್ಳಂದೂರಿನಲ್ಲಿ ಕೊಲೆ:
ಇತ್ತೀಚೆಗೆ ಬೆಳ್ಳಂದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸವಾಗಿದ್ದ ಮುನ್ನಕುಮಾರ್ ಎಂಬುವನ ಕೊಲೆ ಪ್ರಕರಣದಲ್ಲಿ ರೌಡಿ ಪಳನಿ ಭಾಗಿಯಾಗಿದ್ದ.ದಾರಿ ಬಿಡುವ ವಿಚಾರಕ್ಕಾಗಿ ಮುನ್ನ ಕಿರಿಕ್ ಮಾಡಿಕೊಂಡಿದ್ದು, ಇದರಿಂದ ಅಸಮಾಧಾನಗೊಂಡ ಪಳನಿ ಹಾಗೂ ಆತನ ಗ್ಯಾಂಗ್ ಚಾಕವಿನಿಂದ ಕುತ್ತಿಗೆ ಸೀಳಿ ಕೊಲೆ ಮಾಡಿತ್ತು.
ಮೃತನ ಪತ್ನಿ ಕೆಂಪಮ್ಮ ಎಂಬುವರು ನೀಡಿದ ದೂರಿನ ಮೇರೆಗೆ ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
೨೦ಕ್ಕೂ ಹೆಚ್ಚು ಕೃತ್ಯ:
ವಿವಿಧ ರೀತಿಯ ೨೦ಕ್ಕೂ ಹೆಚ್ಚು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ಪಳನಿ ಅಶೋಕ ನಗರ, ಕೋಣನಕುಂಟೆ ಹಾಗು ಕೆ.ಎಸ್ ಲೇಔಟ್ ಠಾಣೆಯ ರೌಡಿಶೀಟರ್ ಎಂಬ ಕುಖ್ಯಾತಿ ಪಡೆದಿದ್ದ. ಈತನ ಮೇಲೆ ಅಶೋಕ ನಗರ, ಸುಬ್ರಹ್ಮಣ್ಯಪುರ ಹಾಗೂ ಬೆಳ್ಳಂದೂರು ಠಾಣೆಯಲ್ಲಿ ೩ ಕೊಲೆ ಪ್ರಕರಣಗಳಿವೆ.
ಕಾಡುಗೋಡಿ, ಜಯನಗರ, ಕೋಣನಕುಂಟೆ, ಕೆ.ಎಸ್.ಲೇಔಟ್, ಹುಳಿಮಾವು, ಆಡುಗೋಡಿ, ವಿಲ್ಸನ್ ಗಾರ್ಡನ್ ಠಾಣೆಗಳಲ್ಲಿ ಕೊಲೆ ಯತ್ನ, ಸುಲಿಗೆ,ದರೋಡೆ, ಹಾಗೂ ಬೆದರಿಕೆ ಸೇರಿದಂತೆ ೧೫ ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ.