ಗುಂಡಿಕ್ಕಿ ಬಿಜೆಪಿ ನಾಯಕ ಚೌಧರಿ ಹತ್ಯೆ

ಮೊರಾದಾಬಾದ್( ಉತ್ತರ ಪ್ರದೇಶ),ಆ.೧೧- ಸಂಭಾಲ್‌ನ ಬಿಜೆಪಿ ನಾಯಕ ಅನುಜ್ ಚೌಧರಿ ಅವರನ್ನು ನಗರದ ಅವರ ನಿವಾಸದ ಹೊರಗೆ ನಿನ್ನೆ ಸಂಜೆ ದುಷ್ಕರ್ಮಿಗಳು ಗುಂಡಿಕ್ಕಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಸಂಭಾಲ್‌ನ ಬಿಜೆಪಿ ನಾಯಕ ಅನುಜ್ ಚೌಧರಿ ಅವರು ಸಂಜೆ ತನ್ನ ಗೆಳೆಯನ ಜೊತೆ ತನ್ನ ಅಪಾರ್ಟ್‌ಮೆಂಟ್‌ನ ಹೊರಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಬೈಕಿನಲ್ಲಿ ಬಂದ ಮೂವರು ಅಪರಿಚಿತರು ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾರೆ.
ಗಂಭೀರ ಗಾಯಗೊಂಡ ಚೌಧರಿ ಅವರನ್ನು ಕೂಡಲೇ ಮೊರಾದಾಬಾದ್‌ನಲ್ಲಿರುವ ಬ್ರೈಟ್‌ಸ್ಟಾರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಸ್ಥಳೀಯ ರಾಜಕೀಯದಲ್ಲಿ ಸಕ್ರಿಯವಾಗಿ ಭಾಗಿಯಾಗಿರುವ ಚೌಧರಿ ಅವರು ಸಂಭಾಲ್‌ನ ಅಸ್ಮೋಲಿ ಬ್ಲಾಕ್‌ನಿಂದ ಬ್ಲಾಕ್ ಮುಖ್ಯಸ್ಥರ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲು ಕಂಡಿದ್ದರು.ಚೌಧರಿ ಮೇಲೆ ದಾಳಿ ನಡೆಸುವ ದೃಶ್ಯಾವಳಿಗಳು ಅಲ್ಲಿನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.ಮಾಧ್ಯಮಗಳೊಂದಿಗೆ ಮಾತನಾಡಿದ ಮೊರಾದಾಬಾದ್ ಎಸ್‌ಎಸ್‌ಪಿ ಹೇಮರಾಜ್ ಮೀನಾ, “ಎರಡೂ ಪಕ್ಷಗಳ ನಡುವೆ ವೈಯಕ್ತಿಕ ದ್ವೇಷ ಮೊದಲಿನಿಂದಲೇ ಇತ್ತು. ಘಟನೆಗೆ ಸಂಬಂಧಿಸಿ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ. ಆರೋಪಿಗಳ ಬಂಧನಕ್ಕೆ ಐದು ತಂಡಗಳನ್ನು ರಚಿಸಲಾಗಿದೆ. ಆರೋಪಿಗಳನ್ನು ಶೀಘ್ರ ಬಂಧಿಸಿ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಹೇಳಿದ್ದಾರೆ.