ಗುಂಡಿಕ್ಕಿ ನಾಲ್ವರು ನಕ್ಸಲೀಯರ ಹತ್ಯೆ

ಮುಂಬೈ, ಮಾ. ೧೯- ಮಹಾರಾಷ್ಟ್ರ ಪೊಲೀಸರು ವಿಶೇಷ ಸಿಆರ್ಪಿಎಫ್ ಮತ್ತು ಕಮಾಂಡೋಗಳು ಗಡ್ಚಿರೋಲಿಯಲ್ಲಿ ಮಿಂಚಿನ ಕಾರ್ಯಾಚರಣೆ ನಡೆಸಿ ನಾಲ್ವರು ನಕ್ಸಲೀಯರನ್ನು ಗುಂಡಿಕ್ಕಿ ಹತ್ಯೆ ಮಾಡಿದೆ.ಕಮಾಂಡೋಗಳು ಮತ್ತು ನಕ್ಸಲೀಯರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ನಾಲ್ವರು ನಕ್ಸಲರು ಹತರಾಗಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.ಈಗಾಗಲೇ ಲೋಕಸಭಾ ಚುನಾವಣೆಗೆ ವೇಳಾಪಟ್ಟಿ ಪ್ರಕಟವಾಗಿದ್ದು, ಮತದಾನದ ವೇಳೆ ವಿಧ್ವಂಸಕ ಕೃತ್ಯ ನಡೆಸಲು ಕೆಲವು ನಕ್ಸಲೀಯರು ತೆಲಂಗಾಣದಿಂದ ಗಡ್ಚಿರೋಲಿಗೆ ಪ್ರವೇಶ ಮಾಡಿದ್ದಾರೆ ಮಾಹಿತಿ ಲಭ್ಯವಾಗಿತ್ತು.ಈ ಹಿನ್ನೆಲೆಯಲ್ಲಿ ಕಮಾಂಡೋಗಳು ಮತ್ತು ಸಿಆರ್‌ಪಿಎಫ್ ಅರಣ್ಯ ಪ್ರದೇಶದಲ್ಲಿ ಶೋಧ ಕಾರ್ಯದಲ್ಲಿ ನಿರಂತರಾಗಿದ್ದರು. ಈ ವೇಳೆ ನಕ್ಸಲೀಯರು ಏಕಾಏಕಿ ಗುಂಡಿನ ಸುರಿಮಳೆಗೈದಿದ್ದಾರೆ. ಈ ಸಂದರ್ಭದಲ್ಲಿ ಕಮಾಂಡೋಗಳು ನಡೆಸಿದ ಪ್ರತಿದಾಳಿಯಲ್ಲಿ ನಾಲ್ವರು ನಕ್ಸಲೀಯರು ಮೃತಪಟ್ಟಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ನೀಲೋತ್ಪಾಲ್ ತಿಳಿಸಿದರು.ಹತ ನಕ್ಸಲೀಯರನ್ನು ವಿವಿಧ ಘಟಕಗಳ ನಕ್ಸಲ್ ಸಮಿತಿಗಳ ಕಾರ್ಯದರ್ಶಿಗಳಾದ ವರ್ಗೀಶ್, ಮಾಗ್ತು ಹಾಗೂ ಪ್ಲಾಟೂನ್ ಸದಸ್ಯರಾದ ಕುರ್ಸಂಗ್ ರಾಜ ಮತ್ತು ಕುಡಿಮೆಂಟ್ ವೆಂಕಟೇಶ್ ಈ ನಾಲ್ವರ ಬಗ್ಗೆ ಮಾಹಿತಿ ನೀಡಿದವರಿಗೆ ೩೬ಲಕ್ಷ ರೂ. ಬಹುಮಾನ ಪ್ರಕಟಿಸಲಾಗಿತ್ತು.
ನಕ್ಸಲೀಯರಿಂದ ಎಕೆ ೪೭ ರೈಫಲ್ ಸೇರಿದಂತೆ ಅಪಾರ ಪ್ರಮಾಣದ ಸಶಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.