ಗುಂಟಾ ಪ್ಲಾಟ್‍ಗಳ ತೆರವು; ಮೋಸಗಾರರಿಗೆ ಎಚ್ಚರಿಕೆ ಸಂದೇಶ

ವಿಜಯಪುರ.ಜ.19:ಜೈನಾಪುರ ಪುನರ್ವಸತಿ ಕೇಂದ್ರದಲ್ಲಿ ಸರ್ಕಾರ ಕಾಯ್ದಿರಿಸಿದ ಜಾಗದಲ್ಲಿ ಕೆಲವು ವ್ಯಕ್ತಿಗಳು ಗುಂಟಾ ಪ್ಲಾಟ್ ಹಾಕಿರುವುದನ್ನು ಮಹಾನಗರ ಪಾಲಿಕೆ ಅಧಿಕಾರಿಗಳ ಮೂಲಕ ಗುರುವಾರ ತೆರವುಗೊಳಿಸಿ, ಸಾರ್ವಜನಿಕ ಉಪಯೋಗಕ್ಕೆ ಮೀಸಲಿಟ್ಟ ಜಾಗದಲ್ಲಿ, ಗುಂಟಾ ಪ್ಲಾಟ್ ಹಾಕಿ ಬಡವರಿಗೆ ಮೋಸದಿಂದ ಮಾರಾಟ ಮಾಡುವವರಿಗೆ ಎಚ್ಚರಿಕೆಯ ಸಂದೇಶ ನೀಡಲಾಗಿದೆ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ವಿಜಯಪುರ ನಗರದ ಜಮಖಂಡಿ ರಸ್ತೆಗೆ ಸಮೀಪದ ಸ.ನಂ.584, 585, 586 ರಲ್ಲಿ, ಜೈನಾಪುರ ಗ್ರಾಮದ ಜಮೀನು ಕಳೆದುಕೊಂಡ ಜನರಿಗೆ ಪುನರ್ವಸತಿ ಸ್ಥಾಪಿಸಲು, ಸರ್ಕಾರದಿಂದ ನಿವೇಶನಗಳನ್ನು ಅಭಿವೃದ್ಧಿಪಡಿಸಿ ಹಂಚಿಕೆ ಮಾಡಲಾಗುತ್ತಿದೆ. ಈ ಜಮೀನಿನ ಕೆಲವು ಭಾಗವನ್ನು ಅಲ್ಲಿನ ಸಾರ್ವಜನಿಕರಿಗೆ ಉಪಯೋಗಿಸಲು ಆಟದ ಮೈದಾನ, ಪ್ರೌಢಶಾಲೆ ಹಾಗೂ ಇತರೆ ಉದ್ದೇಶಕ್ಕಾಗಿ ಕಾಯ್ದಿರಿಸಲಾಗಿದೆ.

ಆದರೆ, ಆ ಜಾಗವನ್ನು ಕೆಲವು ವ್ಯಕ್ತಿಗಳು ಖೊಟ್ಟಿ ಹಕ್ಕುಪತ್ರ ಸೃಷ್ಟಿಸಿ, ಮಹಾನಗರ ಪಾಲಿಕೆಯಲ್ಲಿ ಖಾತಾ ದಾಖಲು ಮಾಡಿಸಿಕೊಂಡು, ಅಮಾಯಕ ಜನರಿಗೆ ಗುಂಟಾ ಪ್ಲಾಟ್ ಅಂತ ಮಾರಾಟ ಮಾಡಿ ಮೋಸ ಮಾಡುತ್ತಿರುವುದು ಗಮನಕ್ಕೆ ಬಂದಿತ್ತು. ಅದಕ್ಕಾಗಿ ಜನವರಿ 12 ರಂದು ಮಹಾನಗರ ಪಾಲಿಕೆ ಆಯುಕ್ತರಿಗೆ ಹಾಗೂ ಪುನರ್ವಸತಿ, ಪುನರ್ ನಿರ್ಮಾಣ ಮತ್ತು ಭೂಸ್ವಾಧೀನ ಕೃ.ಮೇ.ಯೋ ಮಹಾವ್ಯವಸ್ಥಾಪಕರು, ಬಾಗಲಕೋಟೆ ಇವರಿಗೆ ಪತ್ರ ಬರೆದು, ಜಾಗ ಸಂರಕ್ಷಿಸಲು ಹಾಗೂ ಕಾನೂನು ಬಾಹಿರ ಖೊಟ್ಟಿ ಹಕ್ಕುಪತ್ರ ನೀಡಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಪತ್ರದಲ್ಲಿ ಒತ್ತಾಯಿಸಲಾಗಿತ್ತು.

ಗುರುವಾರ ಮಹಾನಗರ ಪಾಲಿಕೆ ಅಧಿಕಾರಿಗಳು ಜೆಸಿಬಿ ಸಹಾಯದಿಂದ ಗುಂಟಾ ಪ್ಲಾಟ್‍ಗಳನ್ನು ತೆರವುಗೊಳಿಸಿ, ಸ್ವಚ್ಛಗೊಳಿಸಿದ್ದಾರೆ. ಈ ಮೂಲಕ ಸರ್ಕಾರದ ಜಾಗದಲ್ಲಿ ಗುಂಟಾ ಪ್ಲಾಟ್ ಹಾಕಿ, ಬಡವರಿಗೆ ಮೋಸದಿಂದ ಮಾರಾಟ ಮಾಡುತ್ತಿರುವವರಿಗೆ ಎಚ್ಚರಿಕೆಯ ಸಂದೇಶ ನೀಡಿದಂತಾಗಿದೆ. ಈ ಪ್ರದೇಶದಲ್ಲಿ ಕಾನೂನುಬಾಹಿರವಾಗಿ ಖೊಟ್ಟಿ ಹಕ್ಕುಪತ್ರ ನೀಡಿದವರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು ಹಾಗೂ ಮುಂದೆ ಈ ರೀತಿ ಆಗದಂತೆ ನಿಗಾವಹಿಸಬೇಕು. ಅಲ್ಲದೆ, ಮುಂದಿನ ದಿನಗಳಲ್ಲಿ ಈ ರೀತಿ ಮಾಡುವವರ ವಿರುದ್ಧ ನಾವೇ ಕ್ರಮಿನಲ್ ಕೇಸ್ ಸಹ ದಾಖಲಿಸುತ್ತೇವೆ ಎಂದು ಶಾಸಕರು ಎಚ್ಚರಿಕೆ ನೀಡಿದ್ದಾರೆ.