ಗಿರೀಶ್ ಎಕ್ಸ್‍ಪೋರ್ಟ್ ಗಾರ್ಮೆಂಟ್ಸ್‍ನಲ್ಲಿ ಕಾರ್ಮಿಕರಿಗೆ ಕಿರುಕುಳ: ರೈತ ಸಂಘ ದೂರು

ಚಾಮರಾಜನಗರ, ಮೇ.21;- ನಗರದ ಹೊರ ವಲಯದ ಉತ್ತುವಳ್ಳಿಯಲ್ಲಿರುವ ಗಿರೀಶ್ ಎಕ್ಸ್‍ಪೋರ್ಟ್ ಗಾಮೆರ್ಂಟ್ಸ್‍ನಲ್ಲಿ ಕಾರ್ಮಿಕರಿಗೆ ಕಿರುಕುಳ ನೀಡಿದ್ದರು. ಕಡಿಮೆ ಸಂಬಳ ನೀಡಿ, ಹೆಚ್ಚು ದುಡಿಸಿಕೊಂಡು ಕಾರ್ಮಿಕರ ಕಾಯ್ದೆಯನ್ನು ಸ್ಪಷ್ಟವಾಗಿ ಉಲ್ಲಂಘಟನೆ ಮಾಡಲಾಗುತ್ತಿದೆ ಎಂದು ರೈತ ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಡಾ. ರಮೇಶ್ ಹಾಗೂ ಕಾರ್ಮಿಕ ಅಧಿಕಾರಿ ಸವಿತಾ ಅವರಿಗೆ ದೂರು ನೀಡಿದ್ದಾರೆ.
ನಗರದ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾಧಿಕಾರಿಗಳ ಕಚೇರಿಗೆ ರೈತ ಸಂಘದ ಪ್ರದಾನ ಕಾರ್ಯದರ್ಶಿ ಡಾ. ಗುರುಪ್ರಸಾದ್ ಹಾಗೂ ಪದಾಧಿಕಾರಿಗಳು ಮತ್ತು ಅಲ್ಲಿನ ಕಾರ್ಮಿಕ ಪಿ. ಮಂಜುನಾಥ್ ಅವರು ದೂರು ನೀಡುವ ಜೊತೆಗೆ ಅಲ್ಲಿ ನಡೆಯುತ್ತಿರುವ ಶೋಷಣೆ ಮತ್ತು ಕಾರ್ಮಿಕರಿಗೆ ನೀಡುತ್ತಿರುವ ಕಿರುಕುಳದ ಬಗ್ಗೆ ಸವಿಸ್ತಾರವಾಗಿ ಇಬ್ಬರು ಅಧಿಕಾರಿಗಳ ಗಮನ ಸೆಳೆದರು.
ಗಿರೀಶ್ ಎಕ್ಸ್‍ಪೋರ್ಟ್‍ನ ಮಾಲೀಕ ಚಾಮರಾಜನಗರಕ್ಕೆ ಬರುತ್ತಿಲ್ಲ. ಇಲ್ಲಿನ ಮಾನೇಜರ್ ಎಲ್ಲವನ್ನು ನಿಭಾಯಿಸುತ್ತಿದ್ದು, ಕಡಿಮೆ ಸಂಬಳಕ್ಕೆ ಹೆಚ್ಚು ಅವಧಿ ದುಡಿಸಿಕೊಳ್ಳುತ್ತಿದ್ದಾರೆ. ಕಾರ್ಮಿಕರಿಗೆ ನೀಡುವ ಕನಿಷ್ಟ ಸೌಲಭ್ಯಗಳನ್ನು ಸಹ ಕಲ್ಪಿಸಿಕೊಡುತ್ತಿಲ್ಲ. ಕಾರ್ಖಾನೆಯಲ್ಲಿ ಸುಮಾರು 600ಕ್ಕು ಹೆಚ್ಚು ಮಹಿಳಾ ಹಾಗು ಪುರುಷ ಕಾರ್ಮಿಕರು ದುಡಿಯುತ್ತಿದ್ದಾರೆ. ಗುಂಡ್ಲುಪೇಟೆ, ಯಳಂದೂರು, ಚಾ.ನಗರ ತಾಲೂಕಿನ ಸುತ್ತಮುತ್ತಲಿನ ಗ್ರಾಮಗಳಿಂದ ಗಾಮೆರ್ಂಟ್ಸ್‍ಗೆ ಬೆಳಗ್ಗೆ 8 ಗಂಟೆಗೆ ಬಂದರೆ ಸಾಯಂಕಾಲ 6 ಗಂಟೆವರೆಗೆ ದುಡಿದು ಹೊರ ಹೋಗುತ್ತಾರೆ. ಗಾಮೆಂಟ್ಸ್‍ನಿಂದ ಯಾವುದೇ ರೀತಿಯ ಸಾರಿಗೆ ವ್ಯವಸ್ಥೆ ಇಲ್ಲ. ಎಲ್ಲರು ಸ್ವಂತ ಖರ್ಚಿನಲ್ಲಿ ಗೂಡ್ಸ್ ಹಾಗೂ ಪ್ರಯಾಣಿಕರ ಆಟೋಗಳಲ್ಲಿ ಬರುತ್ತಿದ್ದಾರೆ. ಬೆಳಗ್ಗೆ ಉಪಹಾರ ಹಾಗೂ ಮಧ್ಯಾಹ್ನದ ಊಟವನ್ನು ಸಹ ಕಾರ್ಮಿಕರು ಮನೆಯಿಂದ ತರಬೇಕಾಗಿದೆ. ಕನಿಷ್ಟ ವೇತನವನ್ನು ಸಹ ನೀಡುತ್ತಿಲ್ಲ. ಹೀಗಾಗಿ ತಾವು ಖುದ್ದಾಗಿ ಗಾಮೆರ್ಂಟ್ಸ್‍ಗೆ ಭೇಟಿ ನೀಡಿ ಪರಿಶೀಲನೆ ಮಾಡಿ, ಅಲ್ಲಿನ ಕಾರ್ಮಿಕರಿಗೆ ನ್ಯಾಯ ಕಲ್ಪಿಸಿಕೊಡಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.
ಅಲ್ಲದೇ ಕಟ್ನವಾಡಿ ಗ್ರಾಮದ ಯುವಕ ಪಿ.ಮಂಜುನಾಥ್ ಕಳೆದ ಐದು ವರ್ಷಗಳಿಂದ ಗಾಮೆಂಟ್ಸ್‍ನಲ್ಲಿ ಕಾರ್ಮಿಕನಾಗಿ ದುಡಿದಿದ್ದಾನೆ. ಆದರೆ, ಈತನಿಗೆ ಆ ಕಂಪನಿಯ ಗುರುತಿನ ಚೀಟಿ ಹೊರತು ಪಡಿಸಿ ಇನ್ಯಾವುದೇ ದಾಖಲಾತಿಗಳನ್ನು ನೀಡಿಲ್ಲ. ಸಂಬಳವನ್ನು ಸಹ ತಿಂಗಳ 10 ನೇ ತಾರೀಖಿನಳೊಗೆ ಬ್ಯಾಂಕ್ ಖಾತೆಗೆ ಜಮಾ ಮಾಡಬೇಕು ಎಂಬ ನಿಯಮವಿದ್ದು ಪಾಲನೆ ಮಾಡಿಲ್ಲ. ಕೇವಲ 11 ತಿಂಗಳಿಗೆ ಮಾತ್ರ ದುಡಿಸಿಕೊಂಡು ಮತ್ತೇ ಒಂದು ತಿಂಗಳು ರಜೆ ಕೊಟ್ಟು ನಂತರ ಕೆಲಸಕ್ಕೆ ತೆಗೆದುಕೊಳ್ಳುವ ಪರಿಪಾಠ ನಿರಂತರವಾಗಿ ನಡೆದುಕೊಂಡು ಬಂದಿದೆ. ಕಡಿಮೆ ಕಾರ್ಮಿಕರನ್ನು ನೀಡಿ, ಹೆಚ್ಚು ಕೆಲಸ ಮಾಡುವಂತೆ ತಾಕೀತು ಮಾಡುವುದು. ಇಲ್ಲದಿದ್ದರೆ ರಾತ್ರಿಯವರೆಗೆ ಕೆಲಸ ಮಾಡಿ ನಂತರ ಹೊರ ಬಿಡಲಾಗುತ್ತಿದೆ. ಹೆಚ್ಚುವರಿ ಕೆಲಸಕ್ಕೆ ಹೆಚ್ಚು ವೇತನವನ್ನು ನೀಡುತ್ತಿಲ್ಲ. ಇದರಿಂದ ಬೇಸತ್ತು ಆತ ಕೆಲಸ ಬಿಟ್ಟಿದ್ದಾನೆ. ಕಳೆದ ಐದು ವರ್ಷದಿಂದ ಆತ ಮಾಡಿರುವ ದುಡಿಮೆಗಾಗಿ ಪಿಎಫ್ ನೀಡುವಂತೆ ಮನವಿ ಮಾಡಿಕೊಂಡರು ಸಹ ಮ್ಯಾನೇಜರ್ ತಾತ್ಸರದ ಉತ್ತರ ನೀಡಿ, ಫ್ಯಾಕ್ಟರಿಯಿಂದ ಹೊರದಬ್ಬಿದ್ದಾರೆ ಎಂದು ಡಾ. ಗುರುಪ್ರಸಾದ್ ಅಸಮಾಧಾನ ವ್ಯಕ್ತಪಡಿಸಿದರು.
ಅಲ್ಲದೇ ಅಲ್ಲಿ ದುಡಿಯುತ್ತಿರುವ ಕಾರ್ಮಿಕರಿಗೂ ಸರಿಯಾದ ವೇತನವು ಸಹ ದೊರೆಯುತ್ತಿಲ್ಲ. ಇವೆಲ್ಲವನ್ನು ತಾವು ಪರಿಗಣಿಸಿ, ಗಾರ್ಮೆಂಟ್ಸ್‍ಗೆ ಭೇಟಿ ನೀಡಿ ಪರಿಶೀಲನೆ ಮಾಡಿ, ನ್ಯಾಯ ಕಲ್ಪಿಸಿಕೊಡಬೇಕು. ತಪ್ಪಿದ್ದಲ್ಲಿ ರೈತ ಸಂಘಟನೆಯ ವತಿಯಿಂದ ಗಾಮೆರ್ಂಟ್ಸ್ ಮುಂದೆ ಧರಣಿ ಸತ್ಯಾಗ್ರಹ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆಯನ್ನು ಸಹ ನೀಡಿದ್ದಾರೆ.
ಈ ಸಂದರ್ಭದಲ್ಲಿ ನೊಂದ ಕಾರ್ಮಿಕ ಮಂಜುನಾಥ್, ರೈತ ಸಂಘದ ಪದಾಧಿಕಾರಿಗಳು ಇದ್ದರು.