ಗಿರಿಜನರ ಪ್ರದೇಶದಲ್ಲಿ ಮತಗಟ್ಟೆಗಳಿಗೆ ಸಾಂಪ್ರದಾಯಿಕ ಸಿಂಗಾರ

ಚಾಮರಾಜನಗರ, ಏ.29:- ಗಿರಿಜನರು ವಾಸಿಸುವ ಪ್ರದೇಶಗಳಲ್ಲಿ ಮತದಾನದ ಪ್ರಮಾಣ ಹೆಚ್ಚಳ ಹಾಗೂ ಪ್ರಜಾಪ್ರಭುತ್ವದ ಹಬ್ಬವಾಗಿರುವ ಚುನಾವಣೆ ಸಂಭ್ರಮ ಸಂದೇಶ ಸಾರುವ ಉದ್ದೇಶದಿಂದ ಜಿಲ್ಲೆಯ 9 ಗಿರಿಜನ ಪ್ರದೇಶಗಳಲ್ಲಿನ ಮತಗಟ್ಟೆಗಳನ್ನು ಗಿರಿಜನರ ಸಂಸ್ಕøತಿ ಬಿಂಬಿಸುವ ರೀತಿಯಲ್ಲಿ ಸಾಂಪ್ರದಾಯಿಕವಾಗಿ ಅಲಂಕರಿಸಲಾಗುತ್ತಿದೆ.
ಜಿಲ್ಲೆಯ ಕೆ.ಗುಡಿಯ ಆಶ್ರಮಶಾಲೆ, ಪುಣಜನೂರು, ಬೇಡಗುಳಿ, ಪುರಾಣಿಪೋಡು, ಮದ್ದೂರು ಕಾಲೋನಿ, ಕೋಣನಕೆರೆ, ರಾಚಪ್ಪಾಜಿನಗರ, ಗಾಣಿಗಮಂಗಲ ಹಾಗೂ ಅರ್ಧನಾರಿಪುರ ಹಾಡಿಯ ಸರ್ಕಾರಿ ಬುಡಕಟ್ಟು ಆಶ್ರಮ ಶಾಲೆಯಲ್ಲಿ ಗಿರಿಜನರ ಕಲೆ, ಸಂಸ್ಕøತಿ, ಪರಂಪರೆ ಬಿಂಬಿಸುವ ಮಾದರಿಯಲ್ಲಿ ಮತಗಟ್ಟೆಗಳನ್ನು ಸಿಂಗಾರಗೊಳಿಸಲಾಗುತ್ತಿದೆ.
ಈಗಾಗಲೇ ಗುಂಡ್ಲುಪೇಟೆ ತಾಲೂಕಿನ ಮದ್ದೂರು ಕಾಲೋನಿಯಲ್ಲಿರುವ ಮತಗಟ್ಟೆ ಸಂಖ್ಯೆ 179 ಆಗಿರುವ ಸರ್ಕಾರಿ ಬುಡಕಟ್ಟು ವಾಲ್ಮೀಕಿ ಆಶ್ರಮ ಶಾಲೆಯನ್ನು ಸಾಂಪ್ರದಾಯಿಕವಾಗಿ ಸಿಂಗಾರಗೊಳಿಸಲಾಗಿದ್ದು ಕಣ್ಮನ ಸೆಳೆಯುತ್ತಿದೆ.
ಉಳಿದ 8 ಮತಗಟ್ಟೆಗಳನ್ನು ಸಹ ಮದ್ದೂರುಕಾಲೋನಿಯ ಬುಡಕಟ್ಟು ವಾಲ್ಮೀಕಿ ಶಾಲೆಯ ಮತಗಟ್ಟೆ ಮಾದರಿಯಲ್ಲಿಯೇ ರೂಪುಗೊಳಿಸಲು ಎಲ್ಲಾ ಸಿದ್ದತೆ ಕೈಗೊಳ್ಳಲಾಗುತ್ತಿದೆ.
ಚುನಾವಣೆ ಪ್ರಜಾಪ್ರಭುತ್ವದ ಹಬ್ಬ. ಮತದಾರರು ಸಂಭ್ರಮದಿಂದ ಜನತಂತ್ರದ ಹಬ್ಬಆಚರಿಸುವಂತಾಗಬೇಕು. ಮತದಾರರು ಶೇ. 100ರಷ್ಟು ಸಕ್ರಿಯವಾಗಿ ಮತದಾನದಲ್ಲಿ ಪಾಲ್ಗೊಂಡು ತಮ್ಮ ಹಕ್ಕು ಚಲಾಯಿಸಬೇಕು. ಈ ದಿಸೆಯಲ್ಲಿ ಪ್ರೋತ್ಸಾಹದಾಯಕವಾಗಿ ಬುಡಕಟ್ಟುಜನರ ಸಾಂಪ್ರದಾಯಿಕ ಕಲೆ, ಸಂಸ್ಕøತಿ ಬಿಂಬಿಸುವ ರೀತಿಯಲ್ಲಿ ಮತಗಟ್ಟೆಗಳನ್ನು ಆಕರ್ಷಕವಾಗಿ ರೂಪುಗೊಳಿಸಲಾಗುತ್ತಿದೆ.
ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲಾ ಸ್ವೀಪ್ ಸಮಿತಿ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಆಸಕ್ತಿಯಿಂದಗಿರಿಜನ ಪ್ರದೇಶದಲ್ಲಿ ಸಾಂಪ್ರದಾಯಿಕವಾಗಿ ಮತಗಟ್ಟೆಗಳನ್ನು ವಿನ್ಯಾಸಗೊಳಿಸುತ್ತಿದೆ.