ಗಿನ್ನಿಸ್ ದಾಖಲೆಗಾಗಿ ಕರ್ನಾಟಕದ 30 ಜಿಲ್ಲೆಗಳಲ್ಲಿ ಏಕಕಾಲಕ್ಕೆ ಯೋಗ

ದಾವಣಗೆರೆ.ಜು.೧೨ : ಕರ್ನಾಟಕದ 30 ಜಿಲ್ಲೆಗಳಲ್ಲಿ ಏಕಕಾಲಕ್ಕೆ 5 ಲಕ್ಷ ಜನರು ಆಯಾ ಜಿಲ್ಲೆಗಳಲ್ಲಿ ಸಾಮೂಹಿಕ ಯೋಗ ನಡೆಸುವ ಬಗ್ಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ತೀರ್ಮಾನಿಸಿದೆ.ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನೆಹರು ಯುವ ಕೇಂದ್ರ ಸಂಘಟನಾ, ರಾಷ್ಟ್ರೀಯ ಸೇವಾ ಯೋಜನೆ, ಆಯುಷ್ ಇಲಾಖೆ ಮತ್ತು ಆಯುಷ್ ಮಾಧ್ಯಮ, ದಾವಣಗೆರೆಯ ತಪೋವನ ಯೋಗ ಪ್ರಕೃತಿ ಚಿಕಿತ್ಸಾ ಮೆಡಿಕಲ್ ಕಾಲೇಜು ಇವುಗಳ ಸಂಯುಕ್ತಾಶ್ರಯದಲ್ಲಿ ಯೋಗಥಾನ್ -2020 ಕಾರ್ಯಕ್ರಮ ಅನುಷ್ಠಾನಗೊಳಿಸುವ ಕುರಿತು ಇಂದು ಬೆಂಗಳೂರಿನ ವಿಧಾನಸೌದಧದಲ್ಲಿ ಸಭೆ ನಡೆಸಿ, ನಿರ್ಧರಿಸಲಾಯಿತು.ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ನಾರಾಯಣ ಗೌಡ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮುಂದಿನ ತಿಂಗಳು ಆಗಸ್ಟ್ 28ಕ್ಕೆ ಅಂತರಾಷ್ಟ್ರೀಯ ಯೂತ್ ಡೇ ಪ್ರಯುಕ್ತ ಗಿನ್ನಿಸ್ ದಾಖಲೆ ದೃಷ್ಠಿಯಿಂದ 30 ಜಿಲ್ಲೆಗಳಲ್ಲಿ ಏಕಕಾಲಕ್ಕೆ ಸಾಮೂಹಿಕ ಯೋಗ ನಡೆಸುವ ಬಗ್ಗೆ ತೀರ್ಮಾನಿಸಲಾಯಿತು.ಯೋಗವನ್ನು ಕ್ರೀಡೆಯಾಗಿ ಪರಿಗಣಿಸಿರುವುದರಿಂದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಪ್ರಥಮ ಬಾರಿಗೆ ನಡೆಸಲಿರುವ ಈ ಯೋಗದಲ್ಲಿ ಭಾಗವಹಿಸಲು ಇಚ್ಚಿಸುವವರು ಯೋಗಥಾನ್ ಎಂಬ ಆ್ಯಪ್ ನಲ್ಲಿ ಉಚಿತ ನೊಂದಣಿ ಮಾಡಿಸಬಹುದಾಗಿದೆ. ಈ ಯೋಗದ ಕುರಿತು 20 ದಿನಗಳ ಮುನ್ನವೇ ತರಬೇತಿ ನೀಡಲಾಗುವುದು. ನಂತರ ಆಗಸ್ಟ್ 28ಕ್ಕೆ ಸಾಮೂಹಿಕ ಯೋಗ ನಡೆಸುವುದಾಗಿ ಸಚಿವ ನಾರಾಯಣ ಗೌಡ ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.ಏಕಕಾಲಕ್ಕೆ ಸಾಮೂಹಿಕ ಯೋಗವು ಜನಕ್ಕೆ ಉಪಯುಕ್ತವಾಗಿದ್ದು, ಈ ಯೋಗದಲ್ಲಿ ಪ್ರತಿಯೊಬ್ಬರೂ ಪಾಲ್ಗೊಂಡು ಸದುಪಯೋಗ ಪಡೆದುಕೊಳ್ಳಬೇಕು. ಭಾಗವಹಿಸಿದವರಿಗೆ ಪ್ರಮಾಣ ಪತ್ರ ನೀಡಲಾಗುವುದು. ಗಿನ್ನಿಸ್ ದಾಖಲೆಯ ಈ ಯೋಗ ಕಾರ್ಯಕ್ರಮದಲ್ಲಿ ತಾವೂ ಸಹ ಪಾಲ್ಗೊಂಡ ಹೆಮ್ಮೆಯ ಜೊತೆಗೆ ಗಿನ್ನಿಸ್ ದಾಖಲೆಗೆ ಕಾರಣೀಭೂತರಾಗಬಹುದು ಎಂದು ಸಭೆಯಲ್ಲಿ ದಾವಣಗೆರೆಯಿಂದ ಭಾಗವಹಿಸಿದ್ದ ತಪೋವನ ಸಮೂಹ ಸಂಸ್ಥೆಯ ಚೇರ್ಮನ್ ಡಾ. ವಿ. ಎಂ. ಶಶಿಕುಮಾರ್ ಮೆಹರ್ವಾಡೆ ಹೇಳಿದ್ದಾರೆ.ಯೋಗದ ಎಲ್ಲಾ ಸಂಘಟನೆಗಳು ಈ ಯೋಗ ಕಾರ್ಯಕ್ರಮಕ್ಕೆ ಸಹಕಾರ ನೀಡಲಾಗುವುದು. ಅಲ್ಲದೇ ಈ ಯೋಗದಲ್ಲಿ ಯೋಗ ಸಂಘಟನೆಗಳು ಉತ್ಸಾಹದಿಂದ ಪಾಲ್ಗೊಳ್ಳಲಿವೆ ಎಂದಿದ್ದಾರೆ.