ಗಿಡ ಮರ ಬೆಳೆಸಿ, ಜೀವಸಂಕುಲ ಉಳಿಸಿ: ಶಾಸಕ ಬಂಡಿ

ಗದಗ,ಏ6 : ಅಭಿವೃದ್ಧಿಯ ಹೆಸರಲ್ಲಿ ಹಾಗೂ ವೈಯಕ್ತಿಕ ಲಾಭಕ್ಕಾಗಿ ನಡೆಯುತ್ತಿರುವ ಮರಗಳ ಮಾರಣಹೋಮ ನಿಲ್ಲಬೇಕು. ಪ್ರತಿಯೊಬ್ಬರಲ್ಲೂ ಗಿಡಮರ ಬೆಳೆಸುವ ಮನೋಭಾವ ಮೂಡಿದಾಗ ಮಾತ್ರ ಪರಿಸರ ಸಂರಕ್ಷಣೆಯಾಗುವ, ಜೀವಸಂಕುಲ ಉಳಿಯುವ, ಅಂತರ್ಜಲ ಹೆಚ್ಚಾಗುವುದು ಎಂದು ಶಾಸಕ ಕಳಕಪ್ಪ ಬಂಡಿ ಅಭಿಪ್ರಾಯ ವ್ಯಕ್ತಪಡಿಸಿದರು.
ಗದಗ ಜಿಲ್ಲೆಯ ರೋಣ ತಾಲೂಕಿನ ಮಾರನಬಸರಿ ಗ್ರಾಮದಲ್ಲಿ ಶನಿವಾರ 1.42 ಕೋಟಿ ರೂ.ಗಳ ಅನುದಾನದಲ್ಲಿ ಜಲ್ ಜೀವನ್ ಮೀಷನ್ ಯೋಜನೆಗೆ ಭೂಮಿ ಪೂಜೆಯನ್ನು ನೆರವೇರಿಸಿ ಅವರು ಮಾತನಾಡಿದರು.
ವಾತಾವರಣ ಸಮತೋಲನ ಕಾಪಾಡುವಲ್ಲಿ ಗಿಡ ಮರಗಳು ಪ್ರಮುಖ ಪಾತ್ರ ವಹಿಸುವದರಿಂದ ಅವುಗಳ ರಕ್ಷ ಣೆಗೆ ಎಲ್ಲರೂ ಪ್ರಯತ್ನಿಸಬೇಕು. ಪ್ರತಿಯೊಬ್ಬರು ಮನೆಯ ಮುಂದೆ ಸಣ್ಣ ಪುಟ್ಟ ಸಸಿ ನೆಡುವ ಕಾರ್ಯದ ಬದಲು ದೊಡ್ಡ ಮರಗಳಾಗುವ ಸಸಿ ನೆಡಬೇಕು. ಮುಖ್ಯವಾಗಿ ಆಲ, ಬೇವು, ನೆರಳೆ ಸೇರಿದಂತೆ ಬೃಹದಾಕಾರವಾಗಿ ಬೆಳೆಯುವ ಮರಗಳಿಗೆ ಹೆಚ್ಚು ಒತ್ತು ನೀಡಬೇಕು. ಇವುಗಳಿಗೆ ನಿರ್ವಹಣೆಯ ಶ್ರಮವೂ ಕಡಿಮೆ. ಇವುಗಳಿಂದ ನೆರಳು, ನೆಮ್ಮದಿ ಅಲ್ಲದೇ ಹಲವು ಉಪಯೋಗಗಳಿವೆ ಎಂದರು.
ರೋಣ ಮತ ಕ್ಷೇತ್ರದ ಪ್ರತಿಯೊಂದು ಹಳ್ಳಗಳ ಜನರಿಗೆ ಕುಡಿಯುವ ನೀರನ್ನು ಸಮಪರ್ಕವಾಗಿ ತಲುಪಿಸುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹೆಚ್ಚಿನ ಆದ್ಯತೆ ನೀಡುತ್ತಿವೆ. ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಗ್ರಾಮೀಣ ಭಾಗದ ಜನರ ಆರೋಗ್ಯ ಗುಣಮಟ್ಟದಿಂದ ಕೂಡಿರಬೇಕು ಮತ್ತು ನಿತ್ಯ ಅವರಿಗೆ ಶುದ್ಧ ನೀರು ಸಿಗಬೇಕು ಎಂಬ ಮಹತ್ವದ ಉದ್ದೇಶವನ್ನು ಇಟ್ಟುಕೊಂಡು ಜಲ್ ಜೀವನ್ ಮೀಷನ್ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಗ್ರಾಮಸ್ಥರು ಯೋಜನೆಯ ಲಾಭವನ್ನು ಪಡೆದುಕೊಳ್ಳಬೇಕು. ಮಾನಬಸರಿ ಗ್ರಾಮದ ಸಮಗ್ರ ಅಭಿವೃದ್ಧಿಗೆ ಸದಾ ಬದ್ಧನಾಗಿದ್ದು, ಮುಂದಿನ ದಿನಗಳಲ್ಲಿ ಗ್ರಾಮಕ್ಕೆ ಇನ್ನೂ ಹೆಚ್ಚಿನ ಅನುದಾನವನ್ನು ಒದಗಿಸುವ ಮೂಲಕ ಮಾದರಿ ಗ್ರಾಮವನ್ನಾಗಿ ರೂಪಿಸಲಾಗುವುದು ಎಂದರು.
ಗ್ರಾ.ಪಂ ಅಧ್ಯಕ್ಷೆ ದಿಲ್‍ಶಾದ್ ದೋಟಿಹಾಳ, ಉಪಾಧ್ಯಕ್ಷ ಶಿವಕುಮಾರ ದಿಂಡೂರ, ತಾ.ಪಂ ಸದಸ್ಯ ಅಂದಾನಪ್ಪ ದೊಡ್ಡಮೇಟಿ, ಮುಖಂಡರಾದ ಮುತ್ತಣ್ಣ ಕಡಗದ, ಚಂದ್ರು ಮಾರನಬಸರಿ, ಶರಣಪ್ಪ ಮರಡಿ, ಬೂದೇಶ ವಣಗೇರಿ, ಶೇಖರಗೌಡ ಪಾಟೀಲ, ವೀರಣ್ಣ ಮರಡಿ, ಉಮೇಶ ಜಾಲಿಹಾಳ, ಹನಮವ್ವ ತಳವಾರ, ಶ್ರೀಶೈಲ್ ಶಾಂತಗೀರಮಠ, ಮುತ್ತಪ್ಪ ಅಂಗಡಿ ಸೇರಿದಂತೆ ಇತರರಿದ್ದರು.