ಗಿಡ ನೆಟ್ಟು ಪರಿಸರ ಕಾಪಾಡಿ: ಡಾ.ಕಾಳೆ

ಭಾಲ್ಕಿ:ಜೂ.7: ಪರಿಶುದ್ಧ ಗಾಳಿಗಾಗಿ ಪ್ರತಿಯೊಬ್ಬರು ಗಿಡ ನೆಟ್ಟು ಸಂರಕ್ಷಣೆ ಮಾಡುವುದು ಅಗತ್ಯವಾಗಿದೆ ಎಂದು ಜಿಲ್ಲಾ ಅಂಕಿತಾಧಿಕಾರಿ ಡಾ.ಸಂತೋಷ ಕಾಳೆ ಹೇಳಿದರು.
ಇಲ್ಲಿನ ರುದ್ರಭೂಮಿಯ ಆವರಣದಲ್ಲಿ ವಿಶ್ವ ಪರಿಸರ ದಿನದ ಅಂಗವಾಗಿ ರೋಟರಿ ಕ್ಲಬ್ ವತಿಯಿಂದ ಹಮ್ಮಿಕೊಂಡ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು,ಪರಿಸರದಲ್ಲಿ ಒಂದು ಮರದ ಅವಶ್ಯಕತೆ ಎಷ್ಟಿದೆ ಎಂಬುದನ್ನು ಪ್ರಸ್ತುತ ಮಹಾಮಾರಿ ಕೊರೊನಾ ತಿಳಿಸಿಕೊಟ್ಟಿದೆ.ಆಮ್ಲಜನಕದ ಕೊರತೆಯಿಂದಾಗಿ ಅನೇಕರು ಕೊರೊನಾಗೆ ಬಲಿಯಾಗಿದ್ದಾರೆ.ಪರಿಸರ ಸ್ವಚ್ಛವಾಗಿಡುವುದು,ಹಸಿರಿನ ಸಂರಕ್ಷಣೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.
ಪ್ರಾಚಾರ್ಯ ಅಶೋಕ ರಾಜೋಳೆ ಮಾತನಾಡಿ,ಮನುಷ್ಯನ ಸ್ವಾರ್ಥ ವರ್ತನೆಯಿಂದ ಪರಿಸರ ದಿನೆ ದಿನೆ ನಾಶವಾಗುತ್ತಿದೆ.ಇದೇ ಕಾರಣದಿಂದಾಗಿ ಇಂದು ಮನುಕುಲ ಅವನತಿಯ ಪಥದತ್ತ ಸಾಗುತ್ತಿದೆ. ವಿಶ್ವ ಪರಿಸರ ದಿನ ಕೇವಲ ಆಚರಣೆಗೆ ಸಿಮೀತವಾಗಿರದೆ,ಸಾರ್ವಜನಿಕರು ಹೆಚ್ಚೆಚ್ಚು ಗಿಡಗಳನ್ನು ನೆಟ್ಟು ಅವುಗಳ ಪೋಷಣೆಗೆ ಮುಂದಾಗಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ರೋಟರಿ ಕೋಶಾಧ್ಯಕ್ಷ ಡಾ.ವಸಂತ ಪವಾರ, ಕಾರ್ಯದರ್ಶಿ ಸಾಗರ ನಾಯಕ,ರೋಟರಿಯನರಾದ ಡಾ.ಅನೀಲ ಸುಕಾಳೆ, ಡಾ.ವಿಲಾಸ ಕನಸೆ, ದತ್ತುಕುಮಾರ ಮೆಹಕರೆ, ನ್ಯಾಯವಾದಿ ಶಾಂತನು ಕುಲಕರ್ಣಿ,ಡಾ. ರಾಹುಲ ರಾಜುರೆ,ಪ್ರೊ. ಅಮರ ಗಿರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

.